ಶುಶ್ರೂಷಕರ ಕಾರ್ಯವು ಹರಿವ ನದಿಯಂತೆ, ಉತ್ತಮ ಶುಶ್ರೂಷಕರಾಗಲು ಮಾನಸಿಕ ಆರೋಗವನ್ನು ಉತ್ತಮ ಆಹಾರ, ಆಚಾರ, ವಿಹಾರ ಮತ್ತು ವಿಚಾರದಿಂದ ಕಾಪಾಡಿಕೊಳ್ಳ ಬೇಕು ಎಂದು ಕೇರಳದ ಕೊಚ್ಚಿ ಅಮೃತ ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಂಶುಪಾಲ ಡಾ. ಕೆ.ಟಿ. ಮೋಲಿ ಹೇಳಿದರು.
ಅವರು ಜ.2ರಂದು ಮಂಗಳೂರು ಯೇನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಒಳಾಂಗಣ ಸಭಾಂಗಣದಲ್ಲಿ ನಡೆದ ಯೇನೆಪೋಯ ನರ್ಸಿಂಗ್ ಕಾಲೇಜಿನ 22ನೇ ಬ್ಯಾಚ್ ಬಿ. ಎಸ್ಸಿ ನರ್ಸಿಂಗ್ ಮತ್ತು 21ನೇ ವರ್ಷದ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ ವಿದ್ಯಾರ್ಥಿಗಳ ದೀಪ ಪ್ರಜ್ವಲನೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲೆ ಡಾ. ಲೀನಾ ಕೆ. ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಶ್ರೂಷ ವೃತ್ತಿಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹೇಳಿದರು. ಸಂಸ್ಥೆಯಿಂದ ಒದಗಿಸುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶುಶ್ರೂಷಕರಾಗಲು ಕರೆ ನೀಡಿದರು.
ಯೇನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಚೀಫ್ ನರ್ಸಿಂಗ್ ಆಫೀಸರ್ ಬ್ರಿಜಿಟ್ ಡಿʼ ಸಿಲ್ವ ಗೌರವ ಅತಿಥಿಯಾಗಿ ಭಾಗವಹಿಸಿದರು. ಉಪಪ್ರಾಂಶುಪಾಲೆ ಡಾ. ಪ್ರಿಯಾ ರೇಶ್ಮ ಅರಾನ್ಹ ಉಪಸ್ಥಿತರಿದ್ದರು.
ಸಹ ಪ್ರಾಧ್ಯಾಪಕ ಗಿರೀಶ್ ಜಿ.ಆರ್. ಕಾರ್ಯಕ್ರಮದ ಮಹತ್ವದ ಕುರಿತು ತಿಳಿಸಿದರು. ಕಾಲೇಜು ಪ್ರಾಂಶುಪಾಲೆ ಡಾ. ಲೀನ ಕೆ.ಸಿ. ಯೇನೆಪೋಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿಯ ಪ್ರತಿಜ್ಞಾವಿಧಿ ಬೋಧಿಸಿದರು.
ಪವಿತ್ರ ಸ್ವಾಗತಿಸಿ, ಶೆರಿನ್ ಡಿʼಸೋಜ ವಂದಿಸಿದರು. ಜೋಯ್ಸ್ ಮತ್ತು ವಿನೀಶ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ 154 ವಿದ್ಯಾರ್ಥಿಗಳು ದೀಪವನ್ನು ಬೆಳಗಿಸಿದರು.