ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ 2024-25ನೇ ಸಾಲಿನ ಹೊಸದಾಗಿ ಸೇರ್ಪಡೆಗೊಂಡಂತಹ ವಿದ್ಯಾರ್ಥಿಗಳ ಆಗತ ಸ್ವಾಗತ ಕಾರ್ಯಕ್ರಮವು ನಡೆಯಿತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗುವುದರ ಮೂಲಕ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳು ದೀಪ ಪ್ರಜ್ವಲನೆ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ೮೨ ವಿದ್ಯಾಸಂಸ್ಥೆಗಳನ್ನು ಒಳಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್‌ಕಲ್ಲಡ್ಕ ಅವರು ಮಾತನಾಡಿ, ಶ್ರೀರಾಮ ವಿದ್ಯಾಕೇಂದ್ರವು ವಿದ್ಯಾರ್ಥಿಗಳ ಮನಸ್ಸಿನ ಅಜ್ಞಾನದ ಕತ್ತಲೆಯನ್ನು ಸಂಸ್ಕಾರ ಎಂಬ ದೀಪ ಬೆಳಗುವುದರ ಮೂಲಕ ನಾಶ ಮಾಡುವ ಜಗತ್ತಿಗೆ ಮಾದರಿಯಾಗುವ ಶಿಕ್ಷಣ ಸಂಸ್ಥೆಯಾಗಿದೆ. ಈ ಉದ್ದೇಶದಿಂದ ಭಾರತೀಯ ಚಿಂತನೆಗಳು ಮತ್ತು ಸಂಸ್ಕೃತಿಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಮತ್ತು ತಮ್ಮ ಜೀವನದಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಬೆಂಗಳೂರು ಶ್ರೀ ಕೃಷ್ಣ ವೆಂಚರ್ಸ್ ಆಡಳಿತ ಪಾಲುದಾರರಾದ ಕೆ. ದಾಮೋದರ ರೆಡ್ಡಿ ಅವರು ಮಾತನಾಡಿ ಮೌಲ್ಯ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಬೆಂಗಳೂರು ಸೋನಾ ಗ್ರೂಪ್‌ಆಫ್ ಇಂಡಸ್ಟ್ರೀಸ್ ನಿರ್ದೇಶಕರಾದ ಗೌತಮ್ ಕಮ್ಮಾಜೆ ಅವರು ಮಾತನಾಡಿ ಶ್ರೀರಾಮ ಪ್ರೌಢಶಾಲೆಯ ಶಿಕ್ಷಣವು ವಿಭಿನ್ನರೀತಿಯಲ್ಲಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ಉತ್ತಮ ನಾಯಕನಾಗವ ಅವಕಾಶ ಇದೆ” ಎಂದು ತಿಳಿಸಿದರು.
ವಿಕಾಸ್ ತೋಳಾರ್ (ಕೃಷಿ ಉದ್ಯಮಿಗಳು,ಕಟೀಲ್ ಮಂಗಳೂರು), ಗೌರಮ್ಮ ದಾಮೋದರ ರೆಡ್ಡಿ (ಆಡಳಿತ ಪಾಲುದಾರರು,ಶ್ರೀ ಕೃಷ್ಣ ವೆಂಚರ್ಸ ಬೆಂಗಳೂರು) ನಿತಿನ್ ಡಿ. ಮತ್ತು ಸಚಿನ್ ಡಿ. ಹಾಗೂ ವಿನುತಾ.ಎಸ್. ಮತ್ತು ದಾಮೋದರ ರೆಡ್ಡಿ ಅವರ ಸಹೋದರಿ ಗೌರಮ್ಮ, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಹಸಂಚಾಲಕರಾದ ರಮೇಶ್‌ಎನ್., ಮುಖ್ಯೋಪಾಧ್ಯಾಯರಾದ ಗೋಪಾಲ್ ಎಂ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಘೃತಾಹುತಿಯನ್ನು ಮಾಡಿ, ಭಾರತಾಂಬೆಗೆ ಪುಷ್ಪಾರ್ಚನೆ ಮತ್ತು ಹಿರಿಯರಿಂದ ತಿಲಕಧಾರಣೆಯೊಂದಿಗೆ ಆಶೀರ್ವಾದ ಪಡೆದರು.
೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಭೂಷಣ್, ನಿಖಿತಾ ಮತ್ತು ಆಕಾಶ್ ಅವರನ್ನು ಗೌರವಿಸಲಾಯಿತು.
ವೈದೇಹಿ ಮತ್ತು ಅನುಶ್ರೀ ಪ್ರೇರಣಾ ಗೀತೆ ಹಾಡಿದರು, ಪ್ರೇಕ್ಷಾ ನಿರೂಪಿಸಿ, ಅಂಕಿತ ಸ್ವಾಗತಿಸಿ, ಪ್ರಾಣೇಶ್ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.