– ನಾವು ಮೂವರು ಪ್ರಕೃತಿಯ ಮಧ್ಯೆ ಖುಷಿಯಾಗಿ ಜೀವನ ಮಾಡುತ್ತಿದ್ದೆವು ಎಂದ ಮೋಹಿ
ಬೆಂಗಳೂರು: 20 ದೇಶದಲ್ಲಿ ಇದೇ ರೀತಿ ಕಾಡಿನಲ್ಲಿ ವಾಸವಿದ್ದೆವು, ಪ್ರಕೃತಿಯ ಜೊತೆಗಿದ್ದು ಅಪಾರವಾದ ಅನುಭವ ಸಿಗುತ್ತದೆ ಎಂದು ಗೋಕರ್ಣ ಗುಹೆಯಲ್ಲಿ (Gokarna Cave) ವಾಸವಿದ್ದ ರಷ್ಯಾ ಮಹಿಳೆ (Russia Woman) ಮೋಹಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ವಿದ್ಯಾರ್ಥಿನಿ ಮೇಲೆ ರೇಪ್,ಬ್ಲ್ಯಾಕ್‌ಮೇಲ್ – ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು, ಸ್ನೇಹಿತ ಅರೆಸ್ಟ್
ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಮಹಿಳೆ, ನನ್ನ ದೊಡ್ಡ ಮಗ ಸಾವನ್ನಪ್ಪಿದ್ದ. ಹೀಗಾಗಿ ವೀಸಾ ಪಡೆಯಲು ಸಾಧ್ಯವಾಗಿರಲಿಲ್ಲ. ಭಾರತದ ವೀಸಾ ಅವಧಿ ಮುಗಿದಿತ್ತು. ಅದಕ್ಕಾಗಿ ನಾನು 20 ದೇಶದಲ್ಲಿ ಇದೇ ರೀತಿ ಕಾಡಿನಲ್ಲಿ ವಾಸವಿದ್ದೆ. ಪ್ರಕೃತಿಯ ಜೊತೆಗಿದ್ದು ಅಪಾರವಾದ ಅನುಭವ ಸಿಗುತ್ತದೆ. ಬದುಕಿನಲ್ಲಿ ಚಂದನೆಯ ಅನುಭವ ಸಿಗಬೇಕು ಎನ್ನುವ ಕಾರಣಕ್ಕೆ ಗುಹೆಯಲ್ಲಿ ಪ್ರಕೃತಿಯ ಮಧ್ಯೆ ವಾಸವಾಗಿದ್ದೆ. ಇನ್ನೂ ನನ್ನ ಮಕ್ಕಳು ಯಾವತ್ತೂ ಹಸಿವೆಯಿಂದ ಬಳಲುತ್ತಿರಲಿಲ್ಲ. ಒಳ್ಳೊಳ್ಳೆ ಆಹಾರವನ್ನು ತಯಾರಿಸಿ ತಿನ್ನುತ್ತಿದ್ದೆವು ಎಂದರು.
ನಾವು ಕಾಡಿನ ಮಧ್ಯೆ ಇದ್ದ ನದಿಯಲ್ಲಿ ಈಜುತ್ತಿದ್ದೇವೆ, ಮಕ್ಕಳು ಕೂಡ ಈಜುತ್ತಿದ್ದರು. ಮಕ್ಕಳು ವಾಟರ್ ಫಾಲ್ಸ್‌ನಲ್ಲಿ ಚೆನ್ನಾಗಿ ಆಟವಾಡುತ್ತಿದ್ದರು. ಚೆನ್ನಾಗಿ ನಿದ್ದೆ ಕೂಡ ಮಾಡುತ್ತಿದ್ದೆವು. ನಾವು ಮೂರು ಜನ ಪ್ರಕೃತಿಯ ಮಧ್ಯೆ ಖುಷಿಯಾಗಿ ಜೀವನ ಮಾಡುತ್ತಿದ್ದೆವು. ಹಳ್ಳಿಯ ಪಕ್ಕದಲ್ಲಿಯೇ ಈ ಗುಹೆ ಇತ್ತು. ಗುಹೆ ಅಂದ್ರೆ ತೀರಾ ಸಣ್ಣ ಇಕ್ಕಟ್ಟು ಗುಹೆ ಅಲ್ಲ, ವಾಸಕ್ಕೆ ಯೋಗ್ಯವಾಗಿದ್ದ ಗುಹೆಯಾಗಿತ್ತು. ಇನ್ನೂ ಗುಹೆಯೊಳಗೆ ಹಾವುಗಳು ಆಗಾಗ ಹರಿದಾಡುತ್ತಿದ್ದವು, ಆದರೆ ನಾವು ಅವುಗಳಿಗೆ ಏನು ಮಾಡುತ್ತಿರಲಿಲ್ಲ. ಹೀಗಾಗಿ ಹಾವುಗಳು ಸುಮ್ಮನೇ ಹೋಗುತ್ತಿದ್ದವು. ನಾನು ಯಾವತ್ತೂ ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿರಲಿಲ್ಲ. ಇಲ್ಲಿಗೆ ಬಂದ ಮೇಲೆ ವೈದ್ಯರ ಬಳಿ ಮಕ್ಕಳನ್ನು ಕರೆದುಕೊಂಡು ಹೋದರು. ಪ್ರಕೃತಿಯ ಮಧ್ಯೆ ಇದ್ದೆವು, ಹೀಗಾಗಿ ಆರೋಗ್ಯವಾಗಿಯೇ ಇರುತ್ತೇವೆ ಎಂದು ತಿಳಿಸಿದರು.
ಜು.12ರಂದು ಗೋಕರ್ಣದ ರಾಮತೀರ್ಥ ದಟ್ಟಾರಣ್ಯದಲ್ಲಿನ ಗುಹೆಯಲ್ಲಿ ಏಕಾಂತವಾಗಿ ವಾಸಿಸುತ್ತಿದ್ದ ರಷ್ಯಾ ಮೂಲದ ಮಹಿಳೆ ಹಾಗೂ ಎರಡು ಪುಟ್ಟ ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು. ಮಹಿಳೆಯನ್ನು ಮೋಹಿ (40), ಅವರ ಪುಟ್ಟ ಮಕ್ಕಳಾದ ಪ್ರೆಯಾ (06) ಹಾಗೂ ಅಮಾ (4) ಎಂದು ಗುರುತಿಸಲಾಗಿತ್ತು.
ರಷ್ಯಾದಿಂದ ಬಿಸಿನೆಸ್ ವಿಸಾದಡಿ ಗೋವಾಕ್ಕೆ ಬಂದಿದ್ದ ಈ ಮಹಿಳೆ ಗೋವಾ ಮೂಲಕ ಗೋಕರ್ಣಕ್ಕೆ ಬಂದು ಇಲ್ಲಿನ ದಟ್ಟ ಅರಣ್ಯವಾದ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದಳು. ಅಲ್ಲಿಯೇ ಚಿಕ್ಕ ರುದ್ರನ ಮೂರ್ತಿ ಇಟ್ಟುಕೊಂಡು ಪೂಜಾ ಕಾರ್ಯ ಮಾಡುತ್ತಾ ದಿನ ಕಳೆಯುತಿದ್ದಳು.
ರಷ್ಯಾದ ಮೋಹಿಗೆ ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು. ಗುಡ್ಡ ಕುಸಿತವಾಗಿರುವ ರಾಮತೀರ್ಥ ಗುಡ್ಡದ ಗುಹೆಯಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಕತ್ತಲಲ್ಲೇ ಬದುಕು ಕಳೆಯುತಿದ್ದಳು. ಎಸ್.ಪಿ ಎಂ ನಾರಾಯಣ್ ಸಲಹೆಯಂತೆ ಆಕೆಗೆ ಸ್ಥಳೀಯ ಎನ್‌ಜಿಓ ಮೂಲಕ ಆಪ್ತ ಸಮಾಲೋಚನೆ ನಡೆಸಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ರಷ್ಯಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಆಕೆಯನ್ನು ಆಕೆಯ ದೇಶಕ್ಕೆ ಪುನಃ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿತ್ತು.