ಕಲ್ಲಡ್ಕ ಫೆ 20: ಬಂಟ್ವಾಳ ತಾಲೂಕು ವೀರಕಂಬ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಗ್ರಾಮ ಸಭೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೆಲಿಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.20 ರಂದು ನಡೆಯಿತು.

ಮಜಿ ವೀರಕಂಬ ಶಾಲಾ ವಿದ್ಯಾರ್ಥಿನಿ ಕು| ದನ್ವಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಸಭೆಗೆ ಭಾಗವಹಿಸಿದ ಮಕ್ಕಳು ಈ ವರ್ಷ ಶಾಲೆಯಲ್ಲಿ ಒಂದು ಬಾರಿಯೂ ಜಂತುಹುಳದ ಮಾತ್ರೆ ಹಾಗೂ ಕಬ್ಬಿನಾಂಶ ಸತ್ವದ ಮಾತ್ರೆ ನೀಡದಿರುದರ ಬಗ್ಗೆ ಪ್ರಶ್ನೆಗಳನ್ನು ಕೇಳಿ, ಆರೋಗ್ಯ ಇಲಾಖೆ ಮಕ್ಕಳ ಆರೋಗ್ಯದ ಕಡೆ ಗಮನಹರಿಸದಕ್ಕೆ ಬೇಸರ ವ್ಯಕ್ತಪಡಿಸಿದರು.

ಪ್ರತಿವರ್ಷವೂ ಫೆಬ್ರವರಿ ಹಾಗೂ ಅಗಸ್ಟ್ ತಿಂಗಳಲ್ಲಿ ಮಕ್ಕಳಿಗೆ ಜಂತುಹುಳುವಿನ ಮಾತ್ರೆ ಹಾಗೂ ಕಬ್ಬಿನಾಂಶ ಯುಕ್ತ ಮಾತ್ರೆಗಳನ್ನು ಆರೋಗ್ಯ ಇಲಾಖೆಯ ಮೂಲಕ ವಿತರಿಸಲಾಗುತ್ತಿತ್ತು. ಆದರೆ ಇನ್ನೂ ಈ ವರ್ಷದ ಶಾಲಾ ಅವಧಿ ಮುಗಿಯುತ್ತ ಬಂದರೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸದೆ ಇರುವುದು ವಿಪರ್ಯಾಸವಾಗಿದೆ. ವೀರಕಂಬ ಗ್ರಾಮ ವ್ಯಾಪ್ತಿಯ ಮೂರು ಶಾಲೆಗಳಾದ ಬಾಯಿಲ, ಮಜಿ, ಕೆಲಿಂಜ ಶಾಲೆಯಿಂದ ಮಕ್ಕಳು ತಮ್ಮ ಶಾಲೆಗೆ ಬೇಕಾದ ಅಗತ್ಯ ಬೇಡಿಕೆಗಳ ಮನವಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷ ಜನಾರ್ಧನ ಪೂಜಾರಿ ನಾರುಕೋಡಿ, ಪಂಚಾಯತ್ ಸದಸ್ಯರುಗಳಾದ ಗೀತಾ ಜಯಶೀಲ ಗಾಂಭೀರ್, ಜಯಪ್ರಸಾದ್, ಸಂದೀಪ್, ಅಂಗನವಾಡಿ ಮೇಲ್ವಿಚಾರಕಿ ರೂಪಕಲ, ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಇಂದಿರಾ ನಾಯ್ಕ್, ವೀರಕಂಬ ಗ್ರಾಮ ವ್ಯಾಪ್ತಿಯ ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ ಕೆಎನ್, ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ವ್ಯಾಪ್ತಿಯ ಶಾಲೆಗಳ ಮಕ್ಕಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ ಸ್ವಾಗತಿಸಿ, ಕೆಲಿಂಜ ಶಾಲಾ ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ ವಂದಿಸಿದರು.