ಅಹಮದಾಬಾದ್: ವಂದೇ ಮೆಟ್ರೋಗೆ ‘ನಮೋ ಭಾರತ್ ರಾಪಿಡ್ ರೈಲ್’ ಎಂದು ಮರುನಾಮಕರಣ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 16) ಮೊದಲ ರೈಲಿಗೆ ಚಾಲನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದ ಹಿಂದಿನ ದಿನವಾದ ಇಂದು (ಸೆಪ್ಟೆಂಬರ್ 16) ಗುಜರಾತ್‌ನಲ್ಲಿ ದೇಶದ ಮೊಟ್ಟ ಮೊದಲ ‘ನಮೋ ಭಾರತ್ ರ‍್ಯಾಪಿಡ್ ರೈಲು’ ಸೇವೆಗೆ ಚಾಲನೆ ನೀಡಿದ್ದಾರೆ. ಈ ರೈಲು ಗುಜರಾತ್‌ನ ಕಚ್ ಜಿಲ್ಲೆಯಲ್ಲಿರುವ ಭುಜ್‌ನಿಂದ ಅಹಮದಾಬಾದ್ ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ.

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಒಂದೇ ದಿನ ಸುಮಾರು 660 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಾರ್ಖಂಡ್, ಒಡಿಶಾ, ಬಿಹಾರ ಮತ್ತು ಉತ್ತರ ಪ್ರದೇಶ ಸಂಪರ್ಕಿಸುವ 6 ವಂದೇ ಭಾರತ್ ರೈಲುಗಳಿಗೆ ವರ್ಚುವಲ್ ಚಾಲನೆ ನೀಡಿದ್ದಾರೆ.

ನಮೋ ಭಾರತ್ ರ‍್ಯಾಪಿಡ್ ರೈಲು ಪ್ರಮುಖ ನಿಲ್ದಾಣಗಳಾದ ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರ, ವಿರಾಮಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಅಂತಿಮವಾಗಿ ಅಹಮದಾಬಾದ್‌ನ ಕಲುಪುರ್ ಸೇರಿದಂತೆ 9 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಸಾರ್ವಜನಿಕರಿಗೆ ಅಹ್ಮದಾಬಾದ್‌ನಿಂದ ಸೆಪ್ಟೆಂಬರ್ 17 ರಂದು ನಿಯಮಿತ ಸೇವೆ ಪ್ರಾರಂಭವಾಗಲಿದೆ.

ನಮೋ ಭಾರತ್ ರ‍್ಯಾಪಿಡ್ ರೈಲಿನ ವಿಶೇಷತೆಗಳು
* ಅಹಮದಾಬಾದ್ -ಭುಜ್ ಸಂಚರಿಸುವ ಈ ರೈಲು ಒಟ್ಟು 9 ನಿಲ್ದಾಣಗಳಲ್ಲಿ ನಿಲ್ಲುತ್ತದೆ.
*ಗಂಟೆಗೆ ಗರಿಷ್ಠ 110 ಕಿಲೋ ಮೀಟರ್ ವೇಗದಲ್ಲಿ 360 ಕಿಲೋ ಮೀಟರ್ ದೂರವನ್ನು 5 ಗಂಟೆ 45 ನಿಮಿಷದಲ್ಲಿ ಕ್ರಮಿಸುತ್ತದೆ.
* 1,150 ಆಸನಗಳನ್ನು ಹೊಂದಿರುವುದಲ್ಲದೇ 2,058 ನಿಂತು ಪ್ರಯಾಣಿಸಬಹುದಾಗಿದೆ. ಕುಳಿತುಕೊಳ್ಳಲು ಮೃದು ಸೋಫಾಗಳನ್ನ ಅಳವಡಿಸಲಾಗಿದೆ.
* ಮೆಟ್ರೋ ಸಂಪೂರ್ಣ ಹವಾನಿಯಂತ್ರಿತವಾಗಿದೆ (ಎ.ಸಿ.)

* ಕನಿಷ್ಠ ಟಿಕೆಟ್ ದರವು 30 ರೂ. ನಿಂದ ಪ್ರಾರಂಭವಾಗುತ್ತದೆ, ಜಿಎಸ್‌ಟಿ ಸೇರಿದಂತೆ, ನಿಖರವಾದ ದರಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
* ಭುಜ್‌ನಿಂದ ಅಹಮದಾಬಾದ್‌ಗೆ ಏಕಮುಖ ಪ್ರಯಾಣಕ್ಕೆ ಜಿಎಸ್‌ಟಿ ಹೊರತುಪಡಿಸಿ 430 ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.