ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಪ್ರೇಯಸಿಯೊಂದಿಗೆ ಶಾಪಿಂಗ್ ಮಾಲ್‌ಗೆ ಬಂದಿದ್ದ ಪತಿಯನ್ನ ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಈ ಘಟನೆಯಲ್ಲಿ, ಪತ್ನಿಯ ಆಕ್ರೋಶಕ್ಕೆ ಹೆದರಿದ ಪತಿರಾಯ, ಪ್ರೇಯಸಿಯನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಾಲೆಂಟೈನ್ಸ್ ಡೇ ಎಂದರೆ ಪ್ರೇಮಿಗಳ ಪಾಲಿಗೆ ಅತ್ಯಂತ ಸಂಭ್ರಮದ ದಿನ. ಪರಸ್ಪರ ಉಡುಗೊರೆಗಳನ್ನು ನೀಡಿ ಪ್ರೀತಿಯನ್ನು ಹಂಚಿಕೊಳ್ಳುವ ಈ ಸುದಿನದಂದು ಇಲ್ಲೊಬ್ಬ ಪತಿಗೆ ಆ ಹಬ್ಬವೇ ಮುಳುವಾಗಿದೆ. ಹೆಂಡತಿಗೆ ತಿಳಿಯದಂತೆ ಪ್ರೇಯಸಿಯೊಂದಿಗೆ ಕಾಲ ಕಳೆಯಲು ಮಾಲ್‌ಗೆ ಬಂದಿದ್ದ ಪತಿರಾಯ, ಅನಿರೀಕ್ಷಿತವಾಗಿ ತನ್ನ ಪತ್ನಿಯ ಕಣ್ಣಿಗೇ ಬಿದ್ದು ಪೇಚಿಗೆ ಸಿಲುಕಿದ ಪ್ರಸಂಗ ಉತ್ತರ ಪ್ರದೇಶದ ಶಾಪಿಂಗ್ ಮಾಲ್ ಒಂದರಲ್ಲಿ ನಡೆದಿದೆ.

ಪತಿಯ ಲೀಲೆ ಕಂಡು ಕೆಂಡಾಮಂಡಲವಾದ ಪತ್ನಿ, ಕೂಡಲೇ ಅಲ್ಲಿಗೆ ತೆರಳಿ ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರೇಯಸಿ ಎದುರೇ ಪತ್ನಿ ಗದ್ದಲ ಆರಂಭಿಸುತ್ತಿದ್ದಂತೆ ಮಾಲ್‌ನಲ್ಲಿದ್ದ ನೂರಾರು ಗ್ರಾಹಕರು ಇತ್ತ ಕಡೆ ತಿರುಗಿ ನೋಡಿದ್ದಾರೆ. ಇಬ್ಬರ ನಡುವೆ ಜೋರಾದ ವಾಗ್ವಾದ ನಡೆದಿದ್ದು, ಪತ್ನಿಯ ಆಕ್ರೋಶ ಕಂಡು ಪ್ರೇಯಸಿ ಕೂಡ ದಂಗಾಗಿದ್ದಾರೆ. ಈ ದೃಶ್ಯ ಮಾಲ್‌ನ ಸಿಸಿಟಿವಿ ಮತ್ತು ಜನರ ಮೊಬೈಲ್‌ಗಳಲ್ಲಿ ಸೆರೆಯಾಗಿದೆ.