ಡೆಹ್ರಾಡೂನ್: ಭಾನುವಾರ ಮುಂಜಾನೆ ಉತ್ತರಾಖಂಡದ ಗೌರಿಕುಂಡ್ ಬಳಿ ಪತನಗೊಂಡ ಹೆಲಿಕಾಪ್ಟರ್‌ನ ಪೈಲಟ್ ಕ್ಯಾಪ್ಟನ್ ರಾಜ್‌ವೀರ್ ಸಿಂಗ್ ಚೌಹಾಣ್ (37) ಭಾರತೀಯ ವಾಯು ಸೇನೆಯಲ್ಲಿ (Indian Air Force) 15ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆಸಲ್ಲಿಸಿದ್ದರು. ಅವರಿಗೆ ವಿವಿಧ ಭೂ ಪ್ರದೇಶಗಳ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಿದ್ದ ಅನುಭವ ಇತ್ತು ಎಂದು ತಿಳಿದು ಬಂದಿದೆ.
ರಾಜಾವೀರ್ ಸಿಂಗ್ ಅವರ ತಂದೆ ಗೋವಿಂದ್ ಸಿಂಗ್ ಮಗನ ಬಗ್ಗೆ ಮಾತನಾಡಿ, ಹೆಲಿಕಾಪ್ಟರ್ ದುರಂತದ ಮಾಹಿತಿ ಅವರ ಸಹೋದ್ಯೋಗಿಗಳಿಂದ ಸಿಕ್ಕಿದೆ. ನನ್ನ ಮಗ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ. ನನ್ನ ಸೊಸೆ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಅವರಿಗೆ ನಾಲ್ಕು ತಿಂಗಳ ಅವಳಿ ಮಕ್ಕಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಪುಣೆಯ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಕನಿಷ್ಠ 20 ಮಂದಿ ನೀರುಪಾಲು
ಜೈಪುರದ ಶಾಸ್ತ್ರಿ ನಗರದ ನಿವಾಸಿಯಾಗಿದ್ದ ರಾಜಾವೀರ್ ಸಿಂಗ್, ಅಕ್ಟೋಬರ್ 2024 ರಿಂದ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ಉತ್ತರಾಖಂಡದ ಬಳಿ ಅಪಘಾತಕ್ಕೀಡಾದ ಬೆಲ್ 407 ಹೆಲಿಕಾಪ್ಟರ್‌ನ ಪೈಲಟ್ ಆಗಿದ್ದರು. ಈ ಅಪಘಾತದಲ್ಲಿ ಅವರನ್ನು ಸೇರಿದಂತೆ 7 ಜನ ಸಾವನ್ನಪ್ಪಿದ್ದರು.
ಸಿಂಗ್ ಅವರು, ವೈಮಾನಿಕ ಕಾರ್ಯಾಚರಣೆಗಳ ಮೇಲ್ವಿಚಾರಣೆ, ವಿವಿಧ ರೀತಿಯ ಹೆಲಿಕಾಪ್ಟರ್‌ಗಳ ಹಾರಾಟ ಮತ್ತು ಅವುಗಳ ನಿರ್ವಹಣೆಯಲ್ಲಿ ತರಬೇತಿ ಪಡೆದಿದ್ದರು.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಇತರ ನಾಯಕರು ಏಳು ಜನರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.