– ಪ್ರಯೋಗಾಲಯದ ಪರೀಕ್ಷೆಯಲ್ಲಿ ಪ್ರಾಣಿಗಳ ಕೊಬ್ಬು, ಮೀನೆಣ್ಣೆ ದೃಢ
ಹೈದರಾಬಾದ್: ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡಿದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂದು ಲ್ಯಾಬ್ ವರದಿ ದೃಢಪಡಿಸಿದೆ.
ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದರು.
ಈ ಆರೋಪದ ಬೆನ್ನಲ್ಲೇ ಪಶು ಆಹಾರ ಮತ್ತು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯ NDDB CALF ನ ವರದಿಯು ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದ ಮಾದರಿಗಳಲ್ಲಿ ತಾಳೆ ಎಣ್ಣೆ, ಮೀನಿನ ಎಣ್ಣೆ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಲಡ್ಡುಗೆ ಬಳಸಿದ ತುಪ್ಪದಲ್ಲಿ ಮೀನೆಣ್ಣೆ, ಹಂದಿಯ ಕೊಬ್ಬು, ತಾಳೆ ಎಣ್ಣೆ ಕೊಬ್ಬು, ತೆಂಗಿನ ಎಣ್ಣೆಯ ಕೊಬ್ಬು ಪತ್ತೆಯಾಗಿದೆ. ಸೋಯಾ, ಸೂರ್ಯಕಾಂತಿ, ಆಲಿವ್, ಹತ್ತಿ ಬೀಜದೆಣ್ಣೆ ಸಿಕ್ಕಿದೆ. ತುಪ್ಪದಲ್ಲಿ ವ್ಹೀಟ್ ಜೆರ್ಮ್ ಆಯಿಲ್, ಮೇಜ್ ಜೆರ್ಮ್ ಆಯಿಲ್ ಪತ್ತೆಯಾಗಿದೆ.
ಸಿಎಂ ಹೇಳಿಕೆಯನ್ನು ಟಿಟಿಡಿ ಭಾಗಶಃ ಒಪ್ಪಿದೆ. ಒಂದು ಕಂಪನಿಯ ತುಪ್ಪದಲ್ಲಿ ವೆಜಿಟೆಬಲ್ ಫ್ಯಾಟ್ ಬೆರೆಸಿರುವುದು ಗೊತ್ತಾಗಿದೆ ಎಂದು ಟಿಟಿಡಿ ಇಓ ಶ್ಯಾಮಲರಾವ್ ಹೇಳಿದ್ದಾರೆ. ಟಿಟಿಡಿ ಮಾಜಿ ಸದಸ್ಯ ಓವಿ ರಮಣ, ಚಂದ್ರಬಾಬು ಹೇಳಿದ್ದೆಲ್ಲಾ ಸತ್ಯ ಎಂದಿದ್ದಾರೆ.
ಜಗನ್ ಸಿಎಂ ಆಗಿದ್ದಾಗ ವಿದೇಶದಿಂದ ಆಮದು ಮಾಡಿಕೊಂಡ ಬೆಣ್ಣೆಯನ್ನು ಲಡ್ಡು ತಯಾರಿಗೆ ಬಳಸಲಾಗುತ್ತಿತ್ತು ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹಿಸಿದೆ.
ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷೆ ವೈ ಎಸ್ ಶರ್ಮಿಳಾ ಅವರು ಸಿಹಿ ತಯಾರಿಸಲು ನಿಜವಾಗಿಯೂ ಪ್ರಾಣಿಗಳ ಕೊಬ್ಬನ್ನು ಬಳಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನಾಯ್ಡು ಅವರ ಆರೋಪಗಳು ವೆಂಕಟೇಶ್ವರನನ್ನು ಪೂಜ್ಯ ದೇವತೆ ಎಂದು ಪರಿಗಣಿಸುವ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಶರ್ಮಿಳಾ ಹೇಳಿದ್ದಾರೆ.