41 ರಾಷ್ಟ್ರಗಳನ್ನು 3 ಗುಂಪುಗಳಾಗಿ ವಿಭಜನೆ; 10 ರಾಷ್ಟ್ರಗಳಿಗೆ ಫುಲ್ ವೀಸಾ ಅಮಾನತು

ವಾಷಿಂಗ್ಟನ್: ಹೊಸ ನಿಷೇಧದ ಭಾಗವಾಗಿ ಅಮೆರಿಕಗೆ  ಹಲವು ದೇಶಗಳ ನಾಗರಿಕರಿಗೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಲು ಟ್ರಂಪ್‌ ಸರ್ಕಾರ ಮುಂದಾಗಿದೆ.

ಪಾಕಿಸ್ತಾನ, ಭೂತಾನ್‌ ಸೇರಿದಂತೆ 41 ದೇಶಗಳ ಪ್ರಜೆಗಳ ಯುಎಸ್‌ ಪ್ರಯಾಣಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. 41 ದೇಶಗಳನ್ನು ಮೂರು ಪ್ರತ್ಯೇಕ ಗುಂಪುಗಳಾಗಿ ವಿಭಜಿಸಲಾಗಿದೆ. ಮೊದಲ ಗುಂಪಿನಲ್ಲಿ ಬರುವ ಅಫ್ಘಾನಿಸ್ತಾನ, ಇರಾನ್, ಸಿರಿಯಾ, ಕ್ಯೂಬಾ ಮತ್ತು ಉತ್ತರ ಕೊರಿಯಾ ಸೇರಿದಂತೆ 10 ದೇಶಗಳ ಪೂರ್ಣ ವೀಸಾ ಅಮಾನತುಗೊಳಿಸಲಾಗುವುದು.

ಎರಡನೇ ಗುಂಪಿನಲ್ಲಿ, ಎರಿಟ್ರಿಯಾ, ಹೈಟಿ, ಲಾವೋಸ್, ಮ್ಯಾನ್ಮಾರ್ ಮತ್ತು ದಕ್ಷಿಣ ಸುಡಾನ್ ದೇಶಗಳು ಭಾಗಶಃ ಅಮಾನತುಗಳನ್ನು ಎದುರಿಸಬೇಕಾಗುತ್ತದೆ. ಇದು ಕೆಲವು ವಿನಾಯಿತಿಗಳೊಂದಿಗೆ ಪ್ರವಾಸಿ ಮತ್ತು ವಿದ್ಯಾರ್ಥಿ ವೀಸಾಗಳು ಹಾಗೂ ಇತರ ವಲಸೆ ವೀಸಾಗಳ ಮೇಲೆ ಪರಿಣಾಮ ಬೀರುತ್ತದೆ.

ಮೂರನೇ ಗುಂಪಿನಲ್ಲಿ, ಪಾಕಿಸ್ತಾನ, ಭೂತಾನ್ ಮತ್ತು ಮ್ಯಾನ್ಮಾರ್ ಸೇರಿದಂತೆ ಒಟ್ಟು 26 ದೇಶಗಳ ಸರ್ಕಾರಗಳು 60 ದಿನಗಳಲ್ಲಿ ನ್ಯೂನತೆಗಳನ್ನು ಪರಿಹರಿಸಲು ಮುಂದಾಗಬೇಕು. ಇಲ್ಲದಿದ್ದರೆ, ಅಮೆರಿಕದ ವೀಸಾ ವಿತರಣೆಯನ್ನು ಭಾಗಶಃ ಸ್ಥಗಿತಗೊಳಿಸುವುದನ್ನು ಪರಿಗಣಿಸಲಾಗುವುದು ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.