ಸಂತ ಶಿರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜ್ ಅವರು ಜಿನೈಕ್ಯರಾಗುವ ಮೂಲಕ ಸಮಾಧಿ ಸ್ಥಿತಿಯನ್ನು ತಲುಪಿದರು. ಅವರ ಅಗಲಿಕೆಯು ನಮ್ಮೆಲ್ಲರನ್ನೂ ದುಃಖತಪ್ತರನ್ನಾಗಿಸಿದೆ. ಅವರ ಜೀವಿತಕಾಲವು ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತ ಪರ್ವವಾಗಿತ್ತು. ಆಳವಾದ ಜ್ಞಾನ, ಅಮಿತ ಕರುಣೆಯ ಜೊತೆಗೆ ಮನುಕುಲದ ಏಳಿಗೆ ಕುರಿತಾಗಿ ಅಚಲ ಬದ್ಧತೆಗೆ ಅವರು ಸಾಕಾರಮೂರ್ತಿಯಾಗಿದ್ದರು. ಹಲವಾರು ಸಂದರ್ಭಗಳಲ್ಲಿ ಅವರ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ, ಗೌರವ ನನ್ನದಾಗಿದೆ. ನಾನೂ ಸೇರಿದಂತೆ ಅಸಂಖ್ಯ ಜೀವಗಳ ಹಾದಿಯನ್ನು ಬೆಳಗಿದ ದಾರಿದೀಪವನ್ನು ಕಳೆದುಕೊಂತಹ ಆಳವಾದ ಭಾವವು ನನ್ನನ್ನು ಕಾಡುತ್ತಿದೆ. ಅವರ ಆತ್ಮೀಯತೆ, ವಾತ್ಸಲ್ಯ ಮತ್ತು ಆಶೀರ್ವಾದಗಳು ಕೇವಲ ಸದ್ಭಾವನೆಯ ಸಂಕೇತಗಳಾಗಿರಲಿಲ್ಲ, ಅವು ಆಳವಾದ ಆಧ್ಯಾತ್ಮಿಕ ಶಕ್ತಿಯ ಸಂವಹನಗಳಾಗಿದ್ದವು. ಅವರೊಂದಿಗೆ ಸಂಪರ್ಕಕ್ಕೆ ಬಂದ ಅದೃಷ್ಟಶಾಲಿಗಳೆಲ್ಲರನ್ನೂ ಅವು ಸಶಕ್ತಗೊಳಿಸುತ್ತವೆ ಮತ್ತು ಪ್ರೇರೇಪಿಸುತ್ತವೆ.

ಪೂಜ್ಯ ಆಚಾರ್ಯ ಅವರನ್ನು ಜ್ಞಾನ, ಕರುಣೆ ಮತ್ತು ಸೇವೆಯ ʻತ್ರಿವೇಣಿʼ ಎಂದು ಸದಾ ಸ್ಮರಿಸಲಾಗುತ್ತದೆ. ಅವರೊಬ್ಬ ನೈಜ ತಪಸ್ವಿಯಾಗಿದ್ದರು, ಅವರ ಜೀವನವು ಭಗವಾನ್ ಮಹಾವೀರರ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ. ಅವರ ಜೀವನವು ಜೈನ ಧರ್ಮದ ಮೂಲ ತತ್ವಗಳಿಗೆ ಉದಾಹರಣೆಯಾಗಿದೆ. ಜೈನ ಧರ್ಮದ ಆದರ್ಶಗಳನ್ನು ತಮ್ಮದೇ ಆದ ಕೃತಿಗಳು ಮತ್ತು ಬೋಧನೆಗಳ ಮೂಲಕ ಅವರು ಸಾಕಾರಗೊಳಿಸಿದರು. ಸಕಲ ಜೀವಿಗಳ ಬಗ್ಗೆ ಅವರ ಕಾಳಜಿಯು ಜೈನ ಧರ್ಮದ ಜೀವನದ ಬಗ್ಗೆ ಅವರು ಹೊಂದಿದ್ದ ಆಳವಾದ ಗೌರವವನ್ನು ಪ್ರತಿಬಿಂಬಿಸುತ್ತದೆ. ಚಿಂತನೆ, ಮಾತು ಮತ್ತು ಕೃತಿಯಲ್ಲಿ ಪ್ರಾಮಾಣಿಕತೆ ಇರಬೇಕೆಂಬ ಜೈನ ಧರ್ಮದ ಮಹತ್ವವನ್ನು ಪ್ರತಿಬಿಂಬಿಸುವ ಮೂಲಕ ಅವರು ಸತ್ಯದ ಜೀವನವನ್ನು ನಡೆಸಿದರು. ಅವರ ಜೀವನಶೈಲಿ ತುಂಬಾ ಸರಳವಾಗಿತ್ತು. ಇಂದು ಜಗತ್ತು ಜೈನ ಧರ್ಮ ಮತ್ತು ಭಗವಾನ್ ಮಹಾವೀರರ ಜೀವನದಿಂದ ಸ್ಫೂರ್ತಿ ಪಡೆಯುತ್ತಿದೆ ಎಂದರೆ ಅದಕ್ಕೆ ಅವರಂತಹ ದಿಗ್ಗಜರೇ ಕಾರಣ. ಜೈನ ಸಮುದಾಯದಲ್ಲಿ ಅವರು ಬಹಳ ಎತ್ತರಕ್ಕೆ ಬೆಳೆದು ನಿಂತರು. ಆದರೆ ಅವರ ಪ್ರಭಾವವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ನಾನಾ ಧರ್ಮಗಳು, ಪ್ರದೇಶಗಳು ಮತ್ತು ಸಂಸ್ಕೃತಿಗಳ ಜನರು ಅವರ ಬಳಿಗೆ ಬಂದರು. ಆಚಾರ್ಯರು ತಮ್ಮ ಜೀವನವಿಡೀ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ, ವಿಶೇಷವಾಗಿ ಯುವಕರಲ್ಲಿ ಆಧ್ಯಾತ್ಮಿಕತೆಯ ಸ್ಫುರಣೆಗಾಗಿ ದಣಿವರಿಯದೆ ಕೆಲಸ ಮಾಡಿದರು.

ಶಿಕ್ಷಣವು ಆಚಾರ್ಯರ ಹೃದಯಕ್ಕೆ ಬಹಳ ಆಪ್ತವಾದ ಕ್ಷೇತ್ರವಾಗಿತ್ತು. ವಿದ್ಯಾಧರನಿಂದ (ಅವರ ಬಾಲ್ಯದ ಹೆಸರು) ವಿದ್ಯಾಸಾಗರ ಆಗುವವರೆಗಿನ ಅವರ ಪ್ರಯಾಣದುದ್ದಕ್ಕೂ ಜ್ಞಾನವನ್ನು ಗಳಿಸುವ ಮತ್ತು ಜ್ಞಾನವನ್ನು ನೀಡುವ ಆಳವಾದ ಬದ್ಧತೆಯನ್ನು ಅವರು ಮುಂದುವರಿಸಿದರು. ಶಿಕ್ಷಣವು ನ್ಯಾಯಯುತ ಮತ್ತು ಪ್ರಬುದ್ಧ ಸಮಾಜದ ಮೂಲಾಧಾರವಾಗಿದೆ ಎಂಬುದು ಅವರ ದೃಢವಾದ ನಂಬಿಕೆಯಾಗಿತ್ತು. ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಸಾಧನವಾಗಿ ಜ್ಞಾನದ ಉದ್ದೇಶವನ್ನು ಅವರು ಪ್ರತಿಪಾದಿಸಿದರು, ಆ ಮೂಲಕ ಅರ್ಥಪೂರ್ಣ ಹಾಗೂ ಮನುಕುಲಕ್ಕೆ ಕೊಡುಗೆಯೊಂದಿಗೆ ಜೀವನವನ್ನು ನಡೆಸಲು ವ್ಯಕ್ತಿಗಳಿಗೆ ಅವರು ಅನುವು ಮಾಡಿಕೊಟ್ಟರು. ಅವರ ಬೋಧನೆಗಳು ನೈಜ ಜ್ಞಾನದ ಮಾರ್ಗಗಳಾಗಿ ಸ್ವಯಂ-ಅಧ್ಯಯನ ಮತ್ತು ಸ್ವಯಂ-ಅರಿವಿನ ಮಹತ್ವವನ್ನು ಒತ್ತಿಹೇಳಿದವು, ಅವರ ಅನುಯಾಯಿಗಳನ್ನು ಜೀವನಪರ್ಯಂತ ಕಲಿಕೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು.

ಇದೇ ವೇಳೆ, ನಮ್ಮ ಯುವಕರು ಪಡೆಯುವ ಶಿಕ್ಷಣವು ನಮ್ಮ ಸಾಂಸ್ಕೃತಿಕ ತತ್ವಗಳಲ್ಲಿ ಬೇರೂರಿರಬೇಕು ಎಂದು ಸಂತ ಶಿರೋಮಣಿ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಜೀ ಅವರು ಬಯಸಿದ್ದರು. ನಾವು ನಮ್ಮ ಹಿಂದಿನ ಕಲಿಕೆಗಳಿಂದ ದೂರ ಉಳಿದಿದ್ದರಿಂದಲೇ ನೀರಿನ ಕೊರತೆಯಂತಹ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗಲಿಲ್ಲ ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಸಮಗ್ರ ಶಿಕ್ಷಣವೆಂಬುದು ಕೌಶಲ್ಯ ಮತ್ತು ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಅವರು ನಂಬಿದ್ದರು. ಭಾರತದ ಭಾಷಾ ವೈವಿಧ್ಯತೆಯ ಬಗ್ಗೆ ಅವರು ಅಪಾರ ಹೆಮ್ಮೆ ಹೊಂದಿದ್ದರು ಮತ್ತು ಭಾರತೀಯ ಭಾಷೆಗಳನ್ನು ಕಲಿಯಲು ಯುವಕರನ್ನು ಪ್ರೋತ್ಸಾಹಿಸಿದರು.

ಪೂಜ್ಯ ಆಚಾರ್ಯರು ಸ್ವತಃ ಸಂಸ್ಕೃತ, ಪ್ರಾಕೃತ ಮತ್ತು ಹಿಂದಿ ಭಾಷೆಗಳಲ್ಲಿ ಬಹಳ ವ್ಯಾಪಕವಾಗಿ ಬರೆದಿದ್ದಾರೆ. ಸಂತರಾಗಿ ಅವರು ಎಷ್ಟು ಔನತ್ಯಕ್ಕೆ ತಲುಪಿದ್ದರು ಮತ್ತು ಆದರೂ ಅವರು ಎಷ್ಟು ವಿನಯವಂತರಾಗಿದ್ದರು ಎಂಬುದನ್ನು ಅವರ ಅಪ್ರತಿಮ ಕೃತಿಯಾದ ʻಮೂಕ್ಮತಿʼಯಲ್ಲಿ ಸ್ಪಷ್ಟವಾಗಿ ಕಾಣಬಹುದು. ತಮ್ಮ ಕೃತಿಗಳ ಮೂಲಕ ಅವರು ದೀನದಲಿತರಿಗೆ ಧ್ವನಿ ನೀಡಿದರು.

ಆರೋಗ್ಯ ಕ್ಷೇತ್ರದಲ್ಲೂ ಪೂಜ್ಯ ಆಚಾರ್ಯ ಅವರ ಕೊಡುಗೆಗಳು ಪರಿವರ್ತನಾತ್ಮಕವಾಗಿವೆ. ಅವರು ಹಲವು ಪ್ರಯತ್ನಗಳಲ್ಲಿ, ಅದರಲ್ಲೂ ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹಲವಾರು ಪ್ರಯತ್ನಗಳಲ್ಲಿ ತೊಡಗಿದ್ದರು. ಆರೋಗ್ಯ ರಕ್ಷಣೆಗೆ ವಿಚಾರವಾಗಿ ಸಮಗ್ರ ಕಾರ್ಯವಿಧಾನವನ್ನು ಅವರು ಅನುಸರಿಸುತ್ತಿದ್ದರು. ಅದು ದೈಹಿಕ ಯೋಗಕ್ಷೇಮವನ್ನು ಆಧ್ಯಾತ್ಮಿಕ ಸ್ವಾಸ್ಥ್ಯದೊಂದಿಗೆ ಸಂಯೋಜಿಸಿ, ಆ ಮೂಲಕ ಒಟ್ಟಾರೆ ವ್ಯಕ್ತಿಯ ಅಗತ್ಯಗಳನ್ನು ಪೂರೈಸುವಂತಿತ್ತು.

ರಾಷ್ಟ್ರ ನಿರ್ಮಾಣದ ಬಗ್ಗೆ ಸಂತ ಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ್ ಮಹಾರಾಜ್ ಅವರ ಬದ್ಧತೆಯ ಬಗ್ಗೆ ವ್ಯಾಪಕ ಅಧ್ಯಯನ ಮಾಡುವಂತೆ ನಾನು ಮುಂಬರುವ ಪೀಳಿಗೆಯನ್ನು ವಿಶೇಷವಾಗಿ ಒತ್ತಾಯಿಸುತ್ತೇನೆ. ಯಾವುದೇ ಪಕ್ಷಪಾತದ ಪರಿಗಣನೆಗಳನ್ನು ಮೀರಿ ರಾಷ್ಟ್ರೀಯ ಹಿತಾಸಕ್ತಿಯತ್ತ ಗಮನ ಹರಿಸುವಂತೆ ಅವರು ಸದಾ ಜನರನ್ನು ಒತ್ತಾಯಿಸುತ್ತಿದ್ದರು. ಅವರು ಮತದಾನದ ಬಲವಾದ ಪ್ರತಿಪಾದಕರಲ್ಲಿ ಒಬ್ಬರಾಗಿದ್ದರು. ಏಕೆಂದರೆ ಅವರು ಅದನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಭಾಗವಹಿಸುವಿಕೆಯ ಅಭಿವ್ಯಕ್ತಿಯಾಗಿ ನೋಡಿದರು. ಅವರು ಆರೋಗ್ಯಕರ ಮತ್ತು ಶುದ್ಧ ರಾಜಕೀಯದ ಪ್ರತಿಪಾದಕರಾಗಿದ್ದರು. ನೀತಿ ನಿರೂಪಣೆಯು ಜನರ ಕಲ್ಯಾಣಕ್ಕೆ ಸಂಬಂಧಿಸಿರಬೇಕು, ಸ್ವಹಿತಾಸಕ್ತಿಗೆ ಅಲ್ಲ (ʻಲೋಕನೀತಿʼ ಎಂಬುದು ʻಲೋಕ್ ಸಂಗ್ರಾಹ್ʼ ಆಗಿರಬೇಕೇ ಹೊರತು ʻಲೋಭಸಂಗ್ರಹʼವಲ್ಲ) ಎಂಬ ತತ್ವದಲ್ಲಿ ನಂಬಿಕೆಯಿಟ್ಟಿದ್ದರು.

ಜನರು ತಮ್ಮ ವಿಚಾರದಲ್ಲಿ, ತಮ್ಮ ಕುಟುಂಬದ ವಿಚಾರದಲ್ಲಿ, ಸಮಾಜ ಮತ್ತು ದೇಶದ ವಿಚಾರದಲ್ಲಿ ತಾವು ನಿರ್ವಹಿಸಬೇಕಾಗಿರುವ ಕರ್ತವ್ಯಗಳ ಬಗ್ಗೆ ಹೊಂದಿರುವ ಬದ್ಧತೆಯ ಅಡಿಪಾಯದ ಮೇಲೆ ಬಲವಾದ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಪೂಜ್ಯ ಆಚಾರ್ಯರು ನಂಬಿದ್ದರು. ಪ್ರಾಮಾಣಿಕತೆ, ಸಮಗ್ರತೆ ಮತ್ತು ಸ್ವಾವಲಂಬನೆಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಅವರು ಜನರನ್ನು ಪ್ರೋತ್ಸಾಹಿಸಿದರು. ಇದು ನ್ಯಾಯಯುತ, ಕರುಣಾಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜದ ಸೃಷ್ಟಿಗೆ ಅತ್ಯಗತ್ಯ ಎಂದು ಅವರು ಅರಿತಿದ್ದರು. ನಾವು ʻವಿಕಸಿತ ಭಾರತʼವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಈ ಹೊತ್ತಿನಲ್ಲಿ ಕರ್ತವ್ಯಗಳಿಗೆ ಒತ್ತು ನೀಡುವುದು ಬಹಳ ಮುಖ್ಯವಾಗಿದೆ.

ಪ್ರಪಂಚದಾದ್ಯಂತ ಪರಿಸರ ನಾಶವು ವ್ಯಾಪಕವಾಗಿರುವ ಈ ಕಾಲಘಟ್ಟದಲ್ಲಿ, ಪೂಜ್ಯ ಆಚಾರ್ಯ ಜೀ ಅವರು ಪ್ರಕೃತಿಗೆ ಹಾನಿಯನ್ನು ಕಡಿಮೆ ಮಾಡುವ ಜೀವನ ವಿಧಾನಕ್ಕೆ ಕರೆ ನೀಡಿದರು. ಅಂತೆಯೇ, ನಮ್ಮ ಆರ್ಥಿಕತೆಯಲ್ಲಿ ಕೃಷಿ ವಹಿಸಬಹುದಾದ ಮಹತ್ವದ ಪಾತ್ರವನ್ನು ಅವರು ಮನಗಂಡಿದ್ದರು. ಕೃಷಿಯನ್ನು ಆಧುನಿಕ ಮತ್ತು ಸುಸ್ಥಿರವಾಗಿಸಲು ಒತ್ತು ನೀಡಿದರು. ಜೈಲಿನಲ್ಲಿರುವ ಕೈದಿಗಳನ್ನು ಸುಧಾರಿಸುವ ನಿಟ್ಟಿನಲ್ಲೂ ಅವರ ಕೆಲಸವು ಗಮನಾರ್ಹವಾದುದು.

ನಮ್ಮ ನೆಲದ ಸೌಂದರ್ಯವೇ ಅಂಥದ್ದು. ಇತರರಿಗೆ ದಾರಿ ದೀಪವಾಗಿ ಬೆಳಕು ತೋರಿದ ಮತ್ತು ನಮ್ಮ ಸಮಾಜವನ್ನು ಉದ್ಧಾರ ಮಾಡಿದ ಶ್ರೇಷ್ಠ ವ್ಯಕ್ತಿಗಳಿಗೆ ಸಾವಿರಾರು ವರ್ಷಗಳಿಂದ ನಮ್ಮ ಮಣ್ಣು ಜನ್ಮ ನೀಡುತ್ತಾ ಬಂದಿದೆ. ಸಂತರು ಮತ್ತು ಸಮಾಜ ಸುಧಾರಕರ ಈ ಶ್ರೇಷ್ಠ ಪರಂಪರೆಯಲ್ಲಿ ಪೂಜ್ಯ ಆಚಾರ್ಯ ಜೀ ಅವರು ಪರಮೋಚ್ಛ ವ್ಯಕ್ತಿಯಾಗಿ ನಿಂತಿದ್ದಾರೆ. ಅವರು ಏನೇ ಮಾಡಿದರೂ, ಅವರು ವರ್ತಮಾನಕ್ಕಾಗಿ ಮಾತ್ರವಲ್ಲ, ಭವಿಷ್ಯಕ್ಕಾಗಿಯೂ ಮಾಡಿದರು. ಕಳೆದ ವರ್ಷ ನವಂಬರ್ ನಲ್ಲಿ ನನಗೆ ಛತ್ತೀಸ್ ಗಢದ ಡೊಂಗರಗಢದಲ್ಲಿರುವ ಚಂದ್ರಗಿರಿ ಜೈನ ಮಂದಿರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಈ ಭೇಟಿ ಪೂಜ್ಯ ಆಚಾರ್ಯಜೀ ಅವರೊಂದಿಗಿನ ನನ್ನ ಕೊನೆಯ ಭೇಟಿಯಾಗಲಿದೆ ಎಂದು ನನಗೆ ಆಗ ತಿಳಿದಿರಲಿಲ್ಲ. ಆ ಕ್ಷಣಗಳು ತುಂಬಾ ವಿಶೇಷವಾಗಿದ್ದವು. ಅವರು ನನ್ನೊಂದಿಗೆ ತಂಬಾ ಹೊತ್ತು ಮಾತನಾಡಿದರು, ರಾಷ್ಟ್ರದ ಸೇವೆಯಲ್ಲಿ ನನ್ನ ಪ್ರಯತ್ನಗಳಿಗಾಗಿ ನನ್ನನ್ನು ಆಶೀರ್ವದಿಸಿದರು. ನಮ್ಮ ದೇಶವು ಸಾಗುತ್ತಿರುವ ದಿಕ್ಕು ಮತ್ತು ವಿಶ್ವ ವೇದಿಕೆಯಲ್ಲಿ ಭಾರತ ಪಡೆಯುತ್ತಿರುವ ಗೌರವದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಅವರು ಮಾಡುತ್ತಿರುವ ಕೆಲಸದ ಬಗ್ಗೆ ಮಾತನಾಡುವಾಗ ಅವರಲ್ಲಿ ಉತ್ಸಾಹ ಉಕ್ಕುತ್ತಿತ್ತು. ಆಗ ಮತ್ತು ಎಂದೆಂದೂ, ಶಾಂತಿ ಮತ್ತು ಉದ್ದೇಶದ ಪ್ರಜ್ಞೆಯನ್ನು ಉದ್ದೀಪಿಸಲು ಅವರ ಸೌಮ್ಯ ನೋಟ ಮತ್ತು ಪ್ರಶಾಂತ ನಗುವೇ ಸಾಕು. ಅವರ ಆಶೀರ್ವಾದವು ಆತ್ಮಕ್ಕೆ ಹಿತವಾದ ಔಷಧದಂತೆ, ನಮ್ಮೊಳಗಿನ ಮತ್ತು ಸುತ್ತಮುತ್ತಲಿನ ದೈವಿಕ ಉಪಸ್ಥಿತಿಯ ಜಾಗೃತಿಯನ್ನು ಅದು ನಮ್ಮಲ್ಲಿ ಮೂಡಿಸುತ್ತದೆ.

ಸಂತ ಶಿರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜ್ ಜೀ ಅವರನ್ನು ಬಲ್ಲ ಮತ್ತು ಅವರ ಬೋಧನೆಗಳು ಹಾಗೂ ಅವರ ಜೀವನದ ಸ್ಪರ್ಶಕ್ಕೆ ಒಳಗಾದ ಎಲ್ಲರಲ್ಲೂ, ಆಚಾರ್ಯ ಜೀ ಅವರ ಅಗಲಿಕೆಯಿಂದ ಉಂಟಾಗಿರುವ ಶೂನ್ಯತೆಯು ಆಳವಾಗಿ ಅನುಭವಕ್ಕೆ ಬರುತ್ತದೆ. ಆದಾಗ್ಯೂ, ಅವರು ತಮ್ಮಿಂದ ಸ್ಫೂರ್ತಿ ಪಡೆದವರ ಹೃದಯ ಮತ್ತು ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ. ಅವರ ಸ್ಮರಣೆಯನ್ನು ಗೌರವಿಸುವ ಮೂಲಕ, ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಸಾಕಾರಗೊಳಿಸಲು ನಾವು ಬದ್ಧರಾಗಿದ್ದೇವೆ. ಆ ಮೂಲಕ, ನಾವು ಒಬ್ಬ ಮಹಾನ್ ಜೀವಿಯ ಆತ್ಮಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ನಮ್ಮ ದೇಶ ಮತ್ತು ಜನರಿಗಾಗಿ ಅವರ ಧ್ಯೇಯವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ.