ಸಂಘ ಪರಿವಾರ ನಮ್ಮ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದವನ್ನು ತೆಗೆದು ಹಾಕಲು ಷಡ್ಯಂತ್ರ ನಡೆಸುತ್ತಿದೆ. ಬಿಜೆಪಿ ತನ್ನ ಹುಟ್ಟಿನಿಂದಲೇ‌ ಸಾಮಾಜಿಕ ನ್ಯಾಯದ ವಿರೋಧಿ ಆಗಿರುವುದರಿಂದ ಹೀಗೆ ಮಾಡುತ್ತಿದೆ. ಈ ಷಡ್ಯಂತ್ರವನ್ನು ರಾಜ್ಯದ ಮತ್ತು ದೇಶದ ಯುವ ಜನತೆ ಸೋಲಿಸಲು ಕಟ್ಟಿಬದ್ಧವಾಗಿ ನಿಂತು ಹೋರಾಟ ಮುನ್ನಡೆಸುತ್ತದೆ ಎನ್ನುವ ಭರವಸೆ ನನಗಿದೆ ಎಂದು ಸಿ.ಎಂ.ಸಿದ್ಧರಾಮಯ್ಯ ಹೇಳಿದರು.
ಅವರು ಮೈಸೂರಿನಲ್ಲಿ ಇಂದು ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಹಾಗೂ “ಯುವ ಶಕ್ತಿ ಪ್ರತಿಜ್ಞೆ 2025” ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಸೈದ್ಧಾಂತಿಕವಾಗಿ ಯಾವತ್ತೂ ರಾಜಿ ಮಾಡಿಕೊಳ್ಳಬಾರದು. ರಾಜಿ ಮಾಡಿಕೊಂಡವರು ರಾಜಕೀಯವಾಗಿ ಉಳಿಯುವುದಿಲ್ಲ, ಬೆಳೆಯುವುದಿಲ್ಲ.
ಮಹಿಳಾ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ರಾಜೀವ್ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ತಂದು 35% ಮಹಿಳಾ ಮೀಸಲಾತಿ ತಂದರು. ಈ ಮೀಸಲಾತಿಯನ್ನು 50% ಗೆ ಹೆಚ್ಚಿಸಲು ಹೋರಾಟ ಮಾಡಿದ್ದು ಸೋನಿಯಾಗಾಂಧಿ. ಇದನ್ನು ಕೂಡ ನೆನಪಿಡಬೇಕು.
ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ ಯುವ ಕಾಂಗ್ರೆಸ್ಸಿನ ಜಾತ್ಯತೀತ ಸೇನಾನಿಗಳು ಸೈದ್ಧಾಂತಿಕ ಹೋರಾಟ ಮುಂದುವರೆಸುತ್ತಾರೆ, ಸೈದ್ಧಾಂತಿಕವಾಗಿ ಯುವ ಸಂಘಟನೆಯನ್ನು ಬಲಗೊಳಿಸುತ್ತಾರೆ ಎಂದು ನಂಬಿದ್ದೇನೆ.
ಕಾಂಗ್ರೆಸ್ ಭಾರತ ದೇಶಕ್ಕೆ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಕೊಡಿಸಿತು. ಆದರೆ ಸಂಘ ಪರಿವಾರವು ಬ್ರಿಟಿಷರ ಜೊತೆ ಶಾಮೀಲಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿತು್ತು ಎನ್ನುವುದು ಇತಿಹಾಸ.
ಯುವ ಕಾಂಗ್ರೆಸ್ ಚುನಾವಣೆ ಮುಗಿದ ಮೇಲೆ ಮುಗಿಯಿತು. ಗೆದ್ದವರು, ಸೋತವರೆಲ್ಲಾ ಒಟ್ಟಾಗಿ ಹೋಗಬೇಕು. ಗುಂಪುಗಾರಿಕೆ ಬೇಡ, ಒಬ್ಬ ನಾಯಕರ ಹಿಂದೆ ಹೋಗಬಾರದು. ಸಿದ್ಧಾಂತವೇ ನಾಯಕತ್ವ. ಸಿದ್ಧಾಂತದ ಜೊತೆಗೆ ನೀವೆಲ್ಲಾ ಇರಬೇಕು ಎಂದರು.