ಶ್ರೀನಗರ: ಸೇನೆಯ ವಿಶೇಷ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಕಥುವಾ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಇಬ್ಬರು ಉಗ್ರರ ಮೃತದೇಹಗಳು ಪತ್ತೆಯಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ಉಗ್ರರು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೆ.18 ರಿಂದ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಇಂದು ಮುಂಜಾನೆ, ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಗಾಯಗೊಂಡಿದ್ದಾರೆ.

ಸೇನಾಪಡೆಗಳು ಕಟ್ಟೆಚ್ಚರದಲ್ಲಿವೆ ಎಂದು ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಕಾಯುವ ಬಿಎಸ್‌ಎಫ್‌ ತಿಳಿಸಿದೆ. ಈ ಗಡಿಯು ಸರಿಸುಮಾರು 3,323 ಕಿಮೀ ವ್ಯಾಪಿಸಿದೆ. ಉದ್ವಿಗ್ನತೆ ಮತ್ತು ಭದ್ರತಾ ಸವಾಲುಗಳನ್ನು ಹೊಂದಿರುವ ವಿವಿಧ ವಲಯಗಳನ್ನು ಈ ಗಡಿ ಭಾಗ ಹೊಂದಿದೆ.