ಟೆಹ್ರಾನ್: ಇರಾನ್‌ನಲ್ಲಿ ಭಾರತದ  3 ಯುವಕರನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಬಿಡುಗಡೆಗಾಗಿ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಅಪಹರಣಕ್ಕೊಳಗಾದವರನ್ನು ಪಂಜಾಬ್‌  ಮೂಲದ ಹುಶನ್‌ಪ್ರೀತ್ ಸಿಂಗ್ (ಸಂಗ್ರೂರ್), ಜಸ್ಪಾಲ್ ಸಿಂಗ್ (ಎಸ್‌ಬಿಎಸ್ ನಗರ) ಮತ್ತು ಅಮೃತ್‌ಪಾಲ್ ಸಿಂಗ್ (ಹೊಶಿಯಾರ್‌ಪುರ್) ಎಂದು ಗುರುತಿಸಲಾಗಿದೆ. ಈ ಮೂವರನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇದನ್ನೂ ಓದಿ: Bantwala ಕೃಷಿ ಇಲಾಖೆ: ಕೃಷಿ ಹೊಂಡ ನಿರ್ಮಾಣಕ್ಕೆ ರೂ.1.02 ಲಕ್ಷ ಸಹಾಯಧನ
ಮೂವರು ಯುವಕರು ಮೇ 1 ರಂದು ಟೆಹ್ರಾನ್‌ಗೆ ತೆರಳಿದ ಸ್ವಲ್ಪ ಸಮಯದ ನಂತರ ನಾಪತ್ತೆಯಾಗಿದ್ದರು. ಇರಾನ್‌ಗೆ ಪ್ರಯಾಣಿಸಿದ ನಂತರ ಯುವಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿಗೆ ನೀಡಲಾಗಿತ್ತು. ರಾಯಭಾರ ಕಚೇರಿಯು ಈ ವಿಷಯವನ್ನು ಇರಾನಿನ ಅಧಿಕಾರಿಗಳೊಂದಿಗೆ ಗಮನಕ್ಕೆ ತಂದು ಚರ್ಚಿಸಿದೆ. ಅವರನ್ನು ತುರ್ತಾಗಿ ಪತ್ತೆಹಚ್ಚಬೇಕು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ರಾಯಭಾರ ಕಚೇರಿ ಮನವಿ ಮಾಡಿದೆ.

ಪಂಜಾಬ್‌ನ ಹೋಶಿಯಾರ್‌ಪುರದ ಏಜೆಂಟ್‌ ಒಬ್ಬ ಈ ಮೂವರನ್ನು ದುಬೈ-ಇರಾನ್ ಮಾರ್ಗದ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸುವುದಾಗಿ ಹೇಳಿದ್ದ. ಅವರಿಗೆ ಇರಾನ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವುದಾಗಿ ಏಜೆಂಟ್ ಭರವಸೆ ನೀಡಿದ್ದ. ಆದರೆ ಅವರು ಅಲ್ಲಿಗೆ ತೆರಳುತ್ತಿದ್ದಂತೆ ಅಪಹರಣಕಾರರು ಯುವಕರನ್ನು ಅಪಹರಿಸಿದ್ದಾರೆ. ಬಿಡುಗಡೆಗೆ 1 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.

ರಾಯಭಾರ ಕಚೇರಿಯು ಯುವಕರ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಅವರ ಪತ್ತೆಗೆ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುತ್ತಿದೆ.

ಅಪಹರಣಕಾರರು ನಮಗೆ ವೀಡಿಯೋ ಕಳುಹಿಸಿದ್ದಾರೆ. ವೀಡಿಯೋದಲ್ಲಿ ಯುವಕರನ್ನು ಹಗ್ಗದಿಂದ ಕಟ್ಟಲಾಗಿದೆ. ಅಲ್ಲದೇ ಅವರ ತೋಳುಗಳಿಂದ ರಕ್ತ ಬರುತ್ತಿದೆ. ಹಣ ಕಳುಹಿಸದಿದ್ದರೆ ಅವರನ್ನು ಕೊಲ್ಲುವುದಾಗಿ ಅಪಹರಣಕಾರರು ಬೆದರಿಕೆ ಹಾಕಿದ್ದಾರೆ. ಫೋನ್‌ ಮೂಲಕ ನಮ್ಮ ಬಳಿ ಮಾತನಾಡುತ್ತಿದ್ದರು. ಮೇ 11 ರಿಂದ ನಮ್ಮ ಸಂಪರ್ಕದಲ್ಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಘಟನೆ ಬೆನ್ನಲ್ಲೇ ಯುವಕರನ್ನು ವಿದೇಶಕ್ಕೆ ಕಳುಹಿಸಿದ್ದ ಏಜೆಂಟ್ ನಾಪತ್ತೆಯಾಗಿದ್ದಾನೆ. ಆತನ ವಿರುದ್ಧ ಮೇ 16 ರಂದು ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.