ವಿದೇಶಗಳಲ್ಲಿ ಓದಿದ ತಕ್ಷಣ ಉದ್ಯೋಗ ಸಿಗುವುದಿಲ್ಲ ಎಂದು ಹರಿಯಾಣದ ಉದ್ಯಮಿಯೊಬ್ಬರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ, ಕೆನಡಾ, ಯುಕೆಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ನವದೆಹಲಿ: ವಿದೇಶಗಳಿಗೆ ಮಕ್ಕಳನ್ನು ಓದಿಸಲು ಕಳುಹಿಸುವುದು ಈಗ ಫ್ಯಾಷನ್ ಆಗಿದೆ. ಶ್ರೀಮಂತರು ಅತೀ ಶ್ರೀಮಂತರಿಗೆ ಇದು ಸಾಮಾನ್ಯ ವಿಷಯ ಎನಿಸಿದ್ದರೆ, ಮಧ್ಯಮ ಹಾಗೂ ಬಡ ಮಧ್ಯಮ ವರ್ಗದ ಜನರು ಕೂಡ ಮಕ್ಕಳನ್ನು ಈಗ ಸಾಲ ಮಾಡಿಯಾದರೂ ವಿದೇಶಕ್ಕೆ ಓದಲು ಕಳುಹಿಸುವ ಇಕ್ಕಟ್ಟಿಗೆ ಸಿಲುಕಿದ್ದರೆ, ಮಕ್ಕಳ ಒತ್ತಡಕ್ಕೋ ಅಥವಾ ಬೇಗ ಉದ್ಯೋಗ ಸಿಗುವುದು ಎಂಬ ಕೆಲ ಮಾರ್ಗದರ್ಶಕರ ದಾರಿ ತಪ್ಪಿಸುವ ಮಾಹಿತಿಯಿಂದಾಗಿ ಸಾಲ ಸೋಲ ಮಾಡಿಯಾದರೂ ಪೋಷಕರು ಮಕ್ಕಳನ್ನು ವಿದೇಶದಲ್ಲಿ ಓದಿಸುವ ಸಂಕಲ್ಪ ಮಾಡುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ವಿದೇಶದಲ್ಲಿ ಓದಿದ ಕೂಡಲೇ ಮಕ್ಕಳಿಗೆ ಉದ್ಯೋಗ ಸಿಕ್ಕಿ ಬಿಡುವುದೇ ಇಲ್ಲ ಏನ್ನುತ್ತಾರೆ ಉದ್ಯಮಿಯೊಬ್ಬರು. ಈ ಬಗ್ಗೆ ಹರಿಯಾಣದ ಉದ್ಯಮಿಯೊಬ್ಬರು ಭಾರತೀಯ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್‌ನಲ್ಲಿ ಅವರು ಮಾಡಿದ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ. ಅವರು ಏನು ಹೇಳಿದ್ದಾರೆ ನೋಡೋಣ. ಈಗಿನ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅಮೆರಿಕ, ಕೆನಡಾ ಮತ್ತು ಯುಕೆಗಳಲ್ಲಿ ಯಾವುದೇ ಉದ್ಯೋಗಗಳಿಲ್ಲ. ಹನಿಮೂನ್ ಮುಗಿದಿದೆ, ದುಬಾರಿ ಶಿಕ್ಷಣಕ್ಕಾಗಿ ಕೋಟಿಗಟ್ಟಲೆ ಖರ್ಚು ಮಾಡುವ ಮೊದಲು ಪೋಷಕರು ಎರಡು ಬಾರಿ ಯೋಚಿಸಬೇಕು. ಎಂಜಿನಿಯರಿಂಗ್ ವಿದ್ಯಾರ್ಥಿಗಳು, ವಿಶೇಷವಾಗಿ ಐಐಟಿಯನ್ನರು, ಸುಲಭವಾದ ಹ್ಯಾಕ್ ಮಾಡಿ, ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆದು $ 200,000 ಆರಂಭಿಕ ವೇತನದ ತಂತ್ರಜ್ಞಾನದ ಕೆಲಸವನ್ನು ಪಡೆದರು. ಆದರೆ ಇನ್ನು ಮುಂದೆ ಈ ಆಟ ನಡೆಯುವುದಿಲ್ಲ ಎಂದು ಅವರು ಎಕ್ಸ್‌ನಲ್ಲಿ ಹರಿಯಾಣ ಮೂಲದ ಉದ್ಯಮಿಯಾಗಿರುವ ರಾಜೇಶ್ ಸಹ್ನಿ(@rajeshsawhney) ಎಂಬುವವರು ಪೋಸ್ಟ್ ಮಾಡಿದ್ದಾರೆ.

ಜಿಎಸ್‌ಎಫ್ ಆಕ್ಸಿಲರೇಟರ್‌ನ ಸ್ಥಾಪಕ ಮತ್ತು ಸಿಇಒ ಆಗಿರುವ ಸಾಹ್ನಿ, ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನ ಅಡ್ವಾನ್ಸ್‌ಡ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂನ ಹಳೆಯ ವಿದ್ಯಾರ್ಥಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಫೆಲೋ ಆಗಿದ್ದಾರೆ. ಅವರು ಯುಎಸ್ ಮತ್ತು ಯುಕೆ ಎರಡರಲ್ಲೂ ಅಧ್ಯಯನ ಮಾಡಿದ್ದರೂ, ಈಗ ಪಾಶ್ಚಿಮಾತ್ಯ ದೇಶಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಯುಗವು ಕೊನೆಗೊಂಡಿದೆ ಎಂದು ಹೇಳುತ್ತಾರೆ.

ಕೆಲವರು ಈ ಮಾತನ್ನು ನಂಬಲು ಸಿದ್ಧರಿಲ್ಲ, ಯಾರು ಇವರ ಮಾತನ್ನು ಕೇಳಬೇಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಬಹುತೇಕರು ಅವರು ಹೇಳುತ್ತಿರುವುದು ನಿಜ ಎಂದಿದ್ದಾರೆ.  ಇದು ನಿಜ ನಾನು 2017ರಲ್ಲಿ ಅಲ್ಲಿದೆ ಆಗ 150,000 ಡಾಲರ್‌ ಮೊತ್ತದ ಉದ್ಯೋಗ ಅವಕಾಶವನ್ನು ಗಳಿಸುತ್ತಿದ್ದರು. ಉದ್ಯೋಗ ಮೇಳಕ್ಕೂ ಮೊದಲು ಕೋರ್ಸ್‌ನ ಮೊದಲ ತ್ರೈಮಾಸಿಕದಲ್ಲಿಯೇ ಈ ರೀತಿಯ ಅವಕಾಶ ಪಡೆಯುತ್ತಿದ್ದರು. ಆದರೆ ಈ ರೀತಿ ಉದ್ಯೋಗ ಪಡೆದ ವ್ಯಕ್ತಿ ಗೂಗಲ್‌ ಸಂಸ್ಥೆಯಲ್ಲಿದ್ದರು, ಆದರೆ ಉದ್ಯೋಗ ಕಡಿತದ ವೇಳೆ ಅವರನ್ನು ತೆಗೆದು ಹಾಕಿದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸಾಲ ಸೋಲ ಮಾಡಿ ಮಕ್ಕಳನ್ನು ವಿದೇಶಕ್ಕೆ ಕಳುಹಿಸುವ ಪೋಷಕರು ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಸರಿಯಾದ ಮಾರ್ಗದರ್ಶನವಿಲ್ಲದೇ ಈ ಮಹತ್ವದ ನಿರ್ಧಾರ ಮಾಡಿದ್ದಲ್ಲಿ ಶ್ರೀಮಂತಿಕೆಯ ಬದಲು ತಲೆಮೇಲೆ ದೊಡ್ಡ ಸಾಲದ ಹೊರೆ ಹೊರುವಂತಹ ಸ್ಥಿತಿ ನಿರ್ಮಾಣವಾಗಬಹುದು.