ಕಲ್ಲಡ್ಕ ಮೇ 31: ಶೈಕ್ಷಣಿಕ ಸಂಸ್ಥೆಗಳು ಮಕ್ಕಳ ಭವಿಷ್ಯವನ್ನು ರೂಪಿಸುತ್ತವೆ, ಶಿಕ್ಷಣದಿಂದ ಮಾತ್ರ ಮಕ್ಕಳು ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ, ಈ ಶೈಕ್ಷಣಿಕ ವರ್ಷವೂ ಎಲ್ಲರಿಗೂ ಶುಭದಾಯಕವಾಗಿರಲಿ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಸಿಂಗೇರಿ ಶುಭಹಾರೈಸಿದರು.
ಅವರು ಮೇ 31ರಂದು ಮಜಿ ವೀರಕಂಬ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳ ಏಳಿಗೆಗಾಗಿ ತನ್ನ ಸಂಪೂರ್ಣ ಜೀವನವನ್ನೇ ಮುಡಿಪಾಗಿರುತ್ತಾರೆ. ತನ್ನ ವೃತ್ತಿಯಲ್ಲಿ ಯಾವುದೇ ರೀತಿಯ ಸ್ವಾರ್ಥವನ್ನು ತೋರದೆ ನಿಸ್ವಾರ್ಥಿಯಾಗಿ ಸೇವೆ ಸಲ್ಲಿಸುತ್ತಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿರುತ್ತಾರೆ ಈ ವರ್ಷವೂ ಶಾಲೆಗೆ ಮಕ್ಕಳಿಗೆ ಎಲ್ಲಾ ರೀತಿಯಲ್ಲಿ ಕೂಡ ಒಳಿತಾಗಲಿ ಎಂದು ನಿರಂತರವಾಗಿ 10 ವರ್ಷಗಳಿಂದ ಶಾಲಾ ಬಿಸಿಯೂಟಕ್ಕೆ ಉಚಿತವಾಗಿ ತರಕಾರಿಯನ್ನು ನೀಡಿ ಸಹಕರಿಸುತ್ತಿರುವ ಚಂದ್ರಿಕಾ ವೆಜಿಟೇಬಲ್ಸ್ ಮೆಲ್ಕಾರ್ ಇದರ ಮಾಲೀಕರಾದ ಮೊಹಮ್ಮದ್ ಶರೀಫ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿಯಾಗಿರುವ. ಪಿಡಬ್ಲ್ಯೂ ಗುತ್ತಿಗೆದಾರದ ಪದ್ಮನಾಭ ಎ. ಅವರು ತರಗತಿ ಕೋಣೆಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿ ಕ್ರಿಯಾತ್ಮಕವಾಗಿ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗುವಂತೆ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು.
ಅನಿವಾರ್ಯ ಕಾರಣಗಳಿಂದ ಆಗಮಿಸಲು ಅಸಾಧ್ಯವಾಗಿ ಶಾಲಾ ಪ್ರಾರಂಭೋತ್ಸವಕ್ಕೆ ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥನ್ ರವರು ದೂರವಾಣಿಯ ಮೂಲಕ ಶುಭ ಹಾರೈಸಿದರು.
ನಿರಂತರವಾಗಿ ಪೂರ್ವ ಪ್ರಾಥಮಿಕ ಮಕ್ಕಳಿಗೆ ಬೆಳಗಿನ ಉಪಹಾರಕ್ಕೆ ಉಚಿತವಾಗಿ ಬಿಸ್ಕೆಟ್ ನೀಡಿ ಸಹಕರಿಸುತ್ತಿರುವ ಪ್ರಸಾದ್ ನಂದನತಿಮಾರ್ ಅವರು ಈ ವರ್ಷವೂ ಪೂರೈಕೆ ಮಾಡೋದಾಗಿ ಆಶ್ವಾಸನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿದ್ದ ಗಣ್ಯರು ಮಕ್ಕಳಿಗೆ ಸರಕಾರದಿಂದ ಸಿಗುವ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ವಿತರಿಸಿದರು. ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ ಉಪಸ್ಥಿತರಿದ್ದರು.
ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡ ಮಕ್ಕಳನ್ನು ಬ್ಯಾಂಡ್ ವಾದ್ಯಗಳಮೂಲಕ ಕರೆತಂದು ಶಾಲಾ ಶಿಕ್ಷಕಿಯರು ಹೂ ಹಾಕಿ ಪನ್ನೀರ್ ಸಿಂಪಡಿಸಿ ಆರತಿ ಬೆಳಗಿ ಸ್ವಾಗತಿಸಿದರು.
ವೀರಕಂಬ ಗ್ರಾಮ ಪಂಚಾಯತ್ ವತಿಯಿಂದ ಸಿಹಿತಿಂಡಿಯ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ ಮಕ್ಕಳಿಗೆ ಸಿಹಿ ಊಟ ನೀಡಲಾಯಿತು. ಶಾಲೆಯನ್ನು ತಲಿರು ತೋರಣ, ಬೇಲೂನುಗಳಿಂದ ಶೃಂಗಾರಿಸಲಾಗಿತ್ತು.
ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟ ಅಗ್ನೇಸ್ ಮಂಡೋಂನ್ಸಾ ಸ್ವಾಗತಿಸಿ, ಶಿಕ್ಷಕಿ ಸಂಪ್ರಿಯ ವಂದಿಸಿ, ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.