ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ ಅವರ ಬದುಕು, ಹೋರಾಟವನ್ನು ಕಟ್ಟಿಕೊಟ್ಟಿರುವ ಸಮರ್ಥ ಜನ ನಾಯಕ ಕೃತಿಯ ಬಿಡುಗಡೆ ಸಮಾರಂಭವನ್ನು ಸಿ.ಎಂ.ಸಿದ್ಧರಾಮಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿ ಉಗ್ರಪ್ಪ ಅವರು ಸಮರ್ಥರೂ ಹೌದು, ಜನ ನಾಯಕರೂ ಹೌದು. ವಿದ್ಯಾರ್ಥಿ ಜೀವನದಲ್ಲೇ ಜನಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿದ್ದವರು.

ಉಗ್ರಪ್ಪ ಬಹಳ ನಿಷ್ಠುರವಾದಿ. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ವಿಚಾರದಲ್ಲಿ ಯಾರ ಜೊತೆಗೂ ರಾಜಿ ಮಾಡಿಕೊಳ್ಳುವುದಿಲ್ಲ. ರಾಜಕೀಯ ಹೋರಾಟದಲ್ಲಿ ಉಗ್ರರಾಗಿದ್ದರೂ‌ ಮನೆಯಲ್ಲಿ ಮಾತ್ರ ಸೌಮ್ಯವಾದಿ. ಸಂವಿಧಾನದ ಆಚೆಗೆ ಯೋಚಿಸುವವರಲ್ಲ. ವಕೀಲರಾಗಿ ಹಲವಾರು ವರ್ಷ ಸಂವಿಧಾನದ ಪಾಠ ಮಾಡಿ ಈಗ ಸಂವಿಧಾನ‌ ನಾಲಗೆ ತುದಿಯಲ್ಲೇ ಇದೆ. ತಪ್ಪುಗಳನ್ನು ಹುಡುಕುವುದರಲ್ಲಿ ಉಗ್ರಪ್ಪರು ನಿಸ್ಸೀಮರು.

ಎಲ್ಲಾ ಕಾಲದಲ್ಲೂ ದ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಇವರ ಪ್ರತೀ ಮಾತು, ಭಾಷಣ ಅವಕಾಶ ವಂಚಿತರ ಪರವಾಗಿಯೇ ಇರುತ್ತದೆ. ಕಾನೂನುಗಳನ್ನು ಚೆನ್ನಾಗಿ ಅರಿತಿರುವ ಉಗ್ರಪ್ಪ ಅವರ ಅನುಭವ, ತಿಳಿವಳಿಕೆ ಪಕ್ಷ ಸಂಘಟನೆಗೆ ಬಹಳ ನೆರವು ನೀಡಿದೆ. ರಾಜಕಾರಣದ ಕೆಲವು ಹಂತಗಳಲ್ಲಿ ಉಗ್ರಪ್ಪ ಅವರಿಗೆ ನೆರವಾಗಲು ಸಾಧ್ಯವಾಗಿದೆ. ಉಳಿದ ಸಂದರ್ಭಗಳಲ್ಲಿ ಸಾಧ್ಯವಾಗಿಲ್ಲ. ಆದರೆ ಎಲ್ಲಾ ಏರಿಳಿತಗಳಲ್ಲೂ ಉಗ್ರಪ್ಪ ಅವರು ತಮ್ಮ ಸಿದ್ಧಾಂತ ಹಾಗೂ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ.

ಉಗ್ರಪ್ಪ ಮತ್ತು ನಾನು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಂಡವರಲ್ಲ. ಈ ಕಾರಣಕ್ಕೇ ನನಗೆ ಮಸಿ ಬಳಿಯಲು ಕೆಲವರು ಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನಗಳು ಹೇಗೆ ಯಶಸ್ವಿ ಆಗುತ್ತದೆ ನಾನೂ ನೋಡುತ್ತೇನೆ.
ಉಗ್ರಪ್ಪ ಮತ್ತು ಪಿ.ಜಿ.ಆರ್.ಸಿಂದ್ಯಾ ಇಬ್ಬರೂ ಆರ್.ಎಸ್.ಎಸ್ ನಲ್ಲಿದ್ದವರು. ಇಬ್ಬರಿಗೂ ಆರ್.ಎಸ್.ಎಸ್‌ನ ದ್ವೇಷದ, ತಾರತಮ್ಯದ, ಜಾತಿವಾದದ ಸತ್ಯ ಗೊತ್ತಾಗಿ ಹೊರಗೆ ಬಂದು ಸಾಮಾಜಿಕ ನ್ಯಾಯದ ಪರವಾಗಿ ನಿಂತಿದ್ದು, ಪ್ರಬುದ್ಧ ಜನಪರ ರಾಜಕಾರಣಿಯಾಗಿದ್ದಾರೆ ಎಂದರು.