ಲೂಯಿಸ್ವಿಲ್ಲೆ:ಮಂಗಳವಾರ ಸಂಜೆ (ನವೆಂಬರ್ 4) ಲೂಯಿಸ್ವಿಲ್ಲೆಯ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಪತನಗೊಂಡಿದೆ. ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ (UPS cargo plane) ಪತನವಾಗಿದ್ದು, ಅವಘಡದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುಪಿಎಸ್ ಫ್ಲೈಟ್ 2976 ( ಸರಕು ವಿಮಾನ) ಲೂಯಿಸ್ವಿಲ್ಲೆ ಏರ್ಪೋರ್ಟ್ನಿಂದ ಹವಾಯಿಯತ್ತ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಮೃತರಾಗಿರೋದನ್ನು ವರದಿಗಳು ಖಚಿತಪಡಿಸಿವೆ. ವಿಮಾನ ಪತನದ ತನಿಖೆಯನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ (NTSB) ನೀಡಲಾಗಿದೆ ಎಂದು ಫೆಡರಲ್ ವಿಮಾನಯಾನ ಆಡಳಿತ (FAA) ಮಾಹಿತಿ ನೀಡಿದೆ. ಇದನ್ನೂ ಓದಿ : ಮಂಗಳೂರು : ಕದ್ರಿ ಪಾರ್ಕ್ನ ರಸ್ತೆಗೆ ಟೋಲ್ ಸಿಸ್ಟಮ್ ರೀತಿಯ ಪಾರ್ಕಿಂಗ್ ಶುಲ್ಕ
ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನಗೊಂಡಿದ್ದು, ದೊಡ್ಡ ಪ್ರಮಾಣದ ಬೆಂಕಿ ಆವರಿಸಿದೆ. ನಿರ್ಜನ ಪ್ರದೇಶದಲ್ಲಿ ವಿಮಾನ ಪತನವಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆಯನ್ನು ನಡೆಸುತ್ತಿದೆ. ದಟ್ಟವಾದ ಹೊಗೆ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಆವರಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನಗಳ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯರು ವಿಮಾನ ಪತನದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಲೂಯಿಸ್ವಿಲ್ಲೆಯ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಯುಪಿಎಸ್ನ ಅತಿದೊಡ್ಡ ಜಾಗತಿಕ ಕೇಂದ್ರವಾಗಿದೆ. ಸುಮಾರು 5 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದ್ದು, 12 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಾರೆ. ಪ್ರತಿದಿನ ಸುಮಾರು 2 ಮಿಲಿಯನ್ ಪಾರ್ಸೆಲ್ ಮಾಡಲಾಗುತ್ತದೆ. ಹಾಗಾಗಿ ದಿನದ 24 ಗಂಟೆಯೂ ಇಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಯುತ್ತದೆ. ಪತನವಾಗಿರುವ ಪ್ಲೇನ್, MD-11F ಮಾದರಿಯದ್ದಾಗಿದೆ.
