ಮಂಡ್ಯ/ಮೈಸೂರು: ಎರಡು ವರ್ಷಗಳ ಬಳಿಕ ಭರ್ತಿಯಾಗಿರುವ ಕನ್ನಡಿಗರ ಜೀವನಾಡಿ ಕನ್ನಂಬಾಡಿ ಅಣೆಕಟ್ಟಿಗೆ ಸಿಎಂ ಸಿದ್ದರಾಮಯ್ಯ ಇಂದು ಬಾಗಿನ ಅರ್ಪಿಸಲಿದ್ದಾರೆ. ಈ ಮೂಲಕ ಅವರು ಮೂರನೇ ಬಾರಿಗೆ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.
ಯಾವಾಗಲೂ ಜಲಾಶಯ ಭರ್ತಿಯಾದ ಅಥವಾ ಭರ್ತಿಯಾಗಿ 3ನೇ ದಿನ ಬಾಗಿನ ಸಲ್ಲಿಸುವುದು ವಾಡಿಕೆ. ಈ ಬಾರಿ ಜಲಾಶಯ ತುಂಬಿದ ಐದಾರು ದಿನಗಳ ಬಳಿಕ ಬಾಗಿನ ಸಲ್ಲಿಸಲಾಗುತ್ತಿದೆ. ಇಂದು ನಡೆಯುವ ಬಾಗಿನ ಸಮಾರಂಭಕ್ಕೆ ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ ಹಾಗೂ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಾಡಿಕೆಯಂತೆ ಡಿಸಿಎಂ ಸೇರಿದಂತೆ ಸಚಿವರು ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆ ಕೆಆರ್‌ಎಸ್ ಡ್ಯಾಮ್‌ನ್ನು ಹೂ ಹಾಗೂ ಕನ್ನಡ ಧ್ವಜಗಳನ್ನು ಹಾಕಿ ಅಲಂಕಾರ ಮಾಡಲಾಗಿದ್ದು, ಮಧುವಣಗಿತ್ತಿಯಂತೆ ಸಿಂಗರಿಸಲಾಗಿದೆ. ಅಲ್ಲದೇ ಡ್ಯಾಂನ ಮುಂಭಾಗದ ವೇದಿಕೆ ಕಾರ್ಯಕ್ರಮಕ್ಕೆ ಜರ್ಮನ್ ಟೆಂಟ್‌ನ್ನು ಹಾಕಲಾಗುತ್ತದೆ. 11 ಗಂಟೆಗೆ ಭಾನುಪ್ರಕಾಶ್ ಅವರ ಸಮ್ಮುಖದಲ್ಲಿ ಬಾಗಿನ ಕಾರ್ಯಕ್ರಮ ಜರುಗಲಿದೆ.
ಮೊದಲಿಗೆ ಸಿಎಂ ಹಾಗೂ ಸಚಿವರು ಕಾವೇರಿಗೆ ಬಾಗಿನ ಅರ್ಪಿಸಿದ ಬಳಿಕ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ಸಂಜೆ ಮೂರು ಗಂಟೆಗೆ ಮೈಸೂರಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಿಸಲಿದ್ದಾರೆ.