ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸಿರುವ 21ನೇ ಚಿತ್ರ ಸಂತೆಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ ಚಿತ್ರಕಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಾರಿ 50 ಲಕ್ಷ ರೂ.ಗಳ ಅನುದಾನವನ್ನು ಪರಿಷತ್ತಿಗೆ ಒದಗಿಸಲಾಗುವುದು ಎಂದರು.

ಎಲ್ಲಾ ಜಿಲ್ಲೆಗಳಲ್ಲಿ ವಸ್ತು ಸಂಗ್ರಹಾಲಯ ಸ್ಥಾಪನೆ ಹಾಗೂ ಆರ್ಟ್ ಗ್ಯಾಲರಿ ಸ್ಥಾಪಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲಿದೆ. 2003 ರಿಂದ ಇಂದಿನವರೆಗೆ ಚಿತ್ರಸಂತೆ ಆಚರಣೆಯಾಗುತ್ತಿದೆ. ಈ ವರ್ಷ 21ನೇ ಚಿತ್ರಸಂತೆ ನಡೆದಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ವರ್ಷ ಚಿತ್ರಸಂತೆಯನ್ನು ಉದ್ಘಾಟಿಸಿದ್ದೇನೆ ಎಂದು ನೆನಪಿಸಿದರು.

ಪ್ರತಿ ವರ್ಷ 3 ರಿಂದ 4 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. 22 ರಾಜ್ಯಗಳಿಂದ 1,600 ಕಲಾವಿದರು ಪಾಲ್ಗೊಳ್ಳುವುದು ಹೆಮ್ಮೆಯ ವಿಷಯ. ಈ ಬಾರಿ ಚಿತ್ರಸಂತೆಯನ್ನು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಮರ್ಪಣೆಯಾಗಿರುವುದು ಅವರಿಗೆ ಸಲ್ಲಿಸಿರುವ ವಿಶೇಷ ಗೌರವವಾಗಿದೆ.