ಶ್ರೀನಗರ: ಅಮರನಾಥ ಯಾತ್ರೆಗೆ ಉಗ್ರರ ಭೀತಿ ಇರುವುದರಿಂದ ಯಾತ್ರೆಯನ್ನು ಸುಗಮವಾಗಿ ನಡೆಸಲು ಭಾರತೀಯ ಭದ್ರತಾ ಪಡೆಗಳು ʻಆಪರೇಷನ್ ಶಿವʼ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿವೆ.
ಯಾತ್ರೆ ಜು.3 ರಂದು ಪ್ರಾರಂಭವಾಗಿ ಆ.9 ರವರೆಗೆ 38 ದಿನಗಳವರೆಗೆ ಅಮರನಾಥ ಯಾತ್ರೆ ನಡೆಯಲಿದೆ. ಈ ಅವಧಿಯಲ್ಲಿ ಹಿಮಾಲಯದ 3,880 ಮೀಟರ್ ಎತ್ತರದಲ್ಲಿರುವ ಶಿವನ ಗುಹಾ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದಾರೆ. ಭಕ್ತರ ಸುರಕ್ಷತೆಗಾಗಿ ಸೇನೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾತ್ರಿ ನಿವಾಸದಿಂದ ಇಡೀ ಮಾರ್ಗದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ :ಆರ್ಸಿಬಿ ಗೆಲುವಿನ ನಶೆಯಲ್ಲಿ ತೇಲಿದ ಫ್ಯಾನ್ಸ್ – ಒಂದೇ ದಿನ 157 ಕೋಟಿ ಎಣ್ಣೆ (ಮದ್ಯ) ಸೇಲ್
ಯಾತ್ರೆಯ ಸಮಯದಲ್ಲಿ ಭದ್ರತಾ ಪಡೆಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಗೃಹ ಸಚಿವ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ. ಅಮರನಾಥ ಯಾತ್ರೆ ನಡೆಯುವ ಮಾರ್ಗ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಅರೆಸೈನಿಕ ಅಧಿಕಾರಿಗಳು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.
ಮಾರ್ಗಗಳು, ಶಿಬಿರಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ 50,000ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದೆ. ಡ್ರೋನ್ಗಳು ಮತ್ತು ಹೆಲಿಕಾಪ್ಟರ್ಗಳನ್ನು ಸಹ ಬಳಸಲಾಗುವುದು. ಯಾತ್ರಿಕರನ್ನು ಪರೀಕ್ಷಿಸಲು ಬಾಡಿ ಸ್ಕ್ಯಾನರ್ಗಳು, ಸಿಸಿಟಿವಿ ಕ್ಯಾಮೆರಾಗಳು ಸೇರಿದಂತೆ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಭದ್ರತಾ ಪಡೆಗಳು ಈಗಾಗಲೇ ದೇಗುಲಕ್ಕೆ ಹೋಗುವ ಮಾರ್ಗದ 3D ಮ್ಯಾಪಿಂಗ್ ಮಾಡಿವೆ. ಎಲ್ಲಾ ನೋಂದಾಯಿತ ಯಾತ್ರಿಕರಿಗೆ ಅವರ ನೈಜ-ಸಮಯದ ಟ್ರ್ಯಾಕಿಂಗ್ RFID ಟ್ಯಾಗ್ಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಈ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.