ನವದೆಹಲಿ: ಇಂದು (ಬುಧವಾರ) ಅಂತರ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ISS) ತೆರಳಬೇಕಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರ ಯಾನ ಮತ್ತೆ ಮುಂದೂಡಿಕೆಯಾಗಿದೆ.
ಫಾಲ್ಕನ್ 9 ಉಡಾವಣಾ ವಾಹನದಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆ ಬಾಹ್ಯಾಕಾಶ ಯಾನ ಮುಂದೂಡಿಕೆಯಾಗಿದೆ. ಉಡಾವಣೆಗೂ ಮುನ್ನ ಉಡಾವಣಾ ಪ್ಯಾಡ್‌ನಲ್ಲಿ ಏಳು ಸೆಕೆಂಡುಗಳ ಬಿಸಿ ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷೆಯ ಸಮಯದಲ್ಲಿ ಪ್ರೊಪಲ್ಷನ್ ಬೇಯಲ್ಲಿ LOX ಸೋರಿಕೆ ಪತ್ತೆಯಾಗಿದೆ. ಇಸ್ರೋ ತಂಡ ಆಕ್ಸಿಯಮ್ ಮತ್ತು ಸ್ಪೇಸ್ ಎಕ್ಸ್‌ನ ತಜ್ಞರೊಂದಿಗೆ ಈ ವಿಷಯದ ಕುರಿತು ನಡೆಸಿದ ಚರ್ಚೆಯ ಆಧಾರದ ಮೇಲೆ ಸೋರಿಕೆಯನ್ನು ಸರಿಪಡಿಸಲು ಮತ್ತು ಉಡಾವಣೆಗೆ ತೆರವುಗೊಳಿಸುವ ಮೊದಲು ಅಗತ್ಯ ಮೌಲ್ಯೀಕರಣ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನಲೆ ಇಂದು ನಡೆಬೇಕಿದ್ದ ಉಡಾವಣೆ ವಿಳಂಬವಾಗಿದೆ. ಮುಂದಿನ ಉಡಾವಣೆ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಿದೆ ಇದನ್ನೂ ಓದಿ :ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ
ಸ್ಪೇಸ್ ಎಕ್ಸ್‌ಗೆ ಸೇರಿದ ಫಾಲ್ಕಂ 9 ರಾಕೆಟ್ ಈ ಗಗನನೌಕೆಯನ್ನು ಆಗಸಕ್ಕೆ ಹೊತ್ತಯ್ಯಲಿದೆ. ಆಕ್ಸಿಯಮ್ ಮಿಷನ್-4 (Axiom-4), 28 ಗಂಟೆ ಕಾಲ ಆಗಸದಲ್ಲಿ ಪ್ರಯಾಣಿಸಲಿದ್ದು, ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಲಿದೆ. ಈ ಗಗನನೌಕೆಯಲ್ಲಿ ಶುಭಾಂಶು ಶುಕ್ಲಾ, ಅಮೆರಿಕಾ, ಹಂಗೇರಿ ಹಾಗೂ ಪೋಲೆಂಡ್‌ನ ನಾಲ್ವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬ್ಯಾಹಾಕಾಶಕ್ಕೆ ಪಯಣ ಬೆಳೆಸಲಿದ್ದಾರೆ. ಮಂಗಳವಾರ ನಡೆಯಬೇಕಿದ್ದ ಈ ಉಪಗ್ರಹ ಉಡಾವಣೆ ಹವಮಾನ ವೈಪರೀತ್ಯದಿಂದ ಬುಧವಾರಕ್ಕೆ ಮುಂದೂಡಲಾಗಿತ್ತು. ಇದೀಗ ತಾಂತ್ರಿಕ ಸಮಸ್ಯೆಯಿಂದ ಮತ್ತೆ ಯಾನ ಮುಂದೂಡಿಕೆಯಾಗಿದೆ. 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ, ಸಂಶೋಧನೆ ನಡೆಯಲಿದೆ.