ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ 12 ರಿಂದ 15% ರಷ್ಟಿದ್ದ ಸಾಕ್ಷರತೆ ಪ್ರಮಾಣ ಪ್ರಸ್ತುತ 74% ತಲುಪಿದೆ. ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದಾಗ ಗುಣಮಟ್ಟದ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ದೊರಕುತ್ತಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಇದು ಶಿಕ್ಷಕರ ತಪ್ಪಲ್ಲ, ಪಟ್ಟಭದ್ರ ವ್ಯವಸ್ಥೆಯ ಪರಿಣಾಮವಾಗಿ ಜಾತಿ ಎನ್ನುವುದು ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವುದರಿಂದ ಶಿಕ್ಷಣದಲ್ಲಿ ನಿರೀಕ್ಷಿಸಿದಷ್ಟು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಕ ಬಂಧುಗಳ ಸೇವೆಯನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿ  ಮಾತನಾಡಿದರು. ಇದನ್ನೂ ಓದಿ : ಸಾರಿ ಫೋಲ್ಡಿಂಗ್ ಹಾಗೂ ಸಾರಿಗೊಂಡೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ
ಶಿಕ್ಷಕರ ನಡವಳಿಕೆ ಉತ್ತಮವಾಗಿರಬೇಕು. ಎಲ್ಲಾ ಮಕ್ಕಳಿಗೂ ವೈಚಾರಿಕತೆ , ವೈಜ್ಞಾನಿಕತೆಯುಳ್ಳ ಶಿಕ್ಷಣ ನೀಡಿದರೆ ಸುಭದ್ರ, ಸುಂದರ ಸಮಾಜ, ದೇಶವನ್ನು ಕಟ್ಟಬಹುದು. ರಾಷ್ಟ್ರದ ಭವಿಷ್ಯವನ್ನು
ರೂಪಿಸುವಂಥ ಮಕ್ಕಳನ್ನು ತಯಾರು ಮಾಡುವುದು ನಿಮ್ಮ ಗುರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಪರಿಷತ್ ಸದಸ್ಯರಾದ ಪುಟ್ಟಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ನುಗ್ಗಲಿ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸಹಸ್ರಾರು ಶಿಕ್ಷಕ ಮಿತ್ರರು ಉಪಸ್ಥಿತರಿದ್ದರು.