ಬಂಟ್ವಾಳ, ಅ. 6 : ನರಿಕೊಂಬು ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಹೆಸರಲ್ಲಿ ಅಭಿವೃದ್ಧಿ ನಿಧಿ ಸ್ಥಾಪಿಸಿ ಅದರ ಆದಾಯಲ್ಲಿ ಕ್ಷೇತ್ರದ ಖರ್ಚು ವೆಚ್ಚಗಳ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ರೂ. 7.08 ಲಕ್ಷ ಠೇವಣಿಯನ್ನು ಸಂಗ್ರಹಿಸಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ರಾಜ್ ಬಂಟ್ವಾಳ್ ಪ್ರಕಟಿಸಿದರು.

ಅವರು ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಅ.6 ರಂದು ನಡೆದ ಧಾರ್ಮಿಕ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಕ್ತಾಧಿಗಳು ಸಹಕರಿಸಿ ಒಂದು ಕೋಟಿ ರೂ. ದೇಣಿಗೆ ಸಂಗ್ರಹದ ನಮ್ಮ ಪ್ರಯತ್ನಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಠೇವಣಿ ಕಡತವನ್ನು ಕಾರ್ಯದರ್ಶಿಗೆ ಹಸ್ತಾಂತರಿಸಿದರು.

2009ರಲ್ಲಿ ಕ್ಷೇತ್ರದ ಅಭಿವದ್ಧಿ ಕೆಲಸ ಆರಂಭವಾಗಿತ್ತು. ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದಲ್ಲಿ ಭಕ್ತಾಧಿಗಳ ಸಹಕಾರದಲ್ಲಿ ಒಂದು ಕೋಟಿಗೂ ಅಧಿಕ ಅಭಿವದ್ಧಿ ಕೆಲಸಗಳು ಆಗಿದೆ. ಕ್ಷೇತ್ರಕ್ಕೆ ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ. ಕಿರು ಸಭಾಂಗಣ, ಸುತ್ತುಪೌಳಿ, ಹೊರಾಂಗಣದಲ್ಲಿ ನೆಲಕ್ಕೆ ಇಂಟರ್ ಲಾಕ್ ಸಹಿತ ಇತರ ಕಾಮಗಾರಿ ನಡೆದಿದೆ ಎಂದರು.

ಕ್ಷೇತ್ರದ ತಂತ್ರಿ ಕೇಶವ ಶಾಂತಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಳೆದ ಹದಿನೈದು ವರ್ಷಗಳಿಂದ ತಾನೇ ಅಧ್ಯಕ್ಷನಾಗಿ ತಂತ್ರಿಯಾಗಿ, ಪ್ರರೋಹಿತನಾಗಿ ಕರ್ತವ್ಯ ನಿರ್ವಹಿಸಿದ್ದು ಚಿಕ್ಕ ಗುಡಿಯಿಂದ ಆರಂಭವಾಗಿ ಪ್ರಸ್ತುತ ಕ್ಷೇತ್ರ ನಿರ್ಮಾಣದಲ್ಲಿ ಭಕ್ತಾಧಿಗಳ ದೊಡ್ಡ ಸಹಕಾರವಿತ್ತು ಎಂದರು.

ನೂತನ ಸಮಿತಿ ಅಧ್ಯಕ್ಷ ರಾಜ್ ಬಂಟ್ವಾಳ್ ತನ್ನ ಸೇವಾ ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಹೊಸಮನೆ ಮೋನಪ್ಪ ಪೂಜಾರಿ ಕೋಶಾಧಿಕಾರಿಯಾಗಿ, ಸಂಜೀವ ಸಪಲ್ಯರು ಉಪಾಧ್ಯಕ್ಷರಾಗಿದ್ದು ಎಲ್ಲಾ ಪದಾಧಿಕಾರಿಗಳ ಸೇವೆಯನ್ನು ಸ್ಮರಿಸಿದರು.

ಕ್ಷೇತ್ರದ ಕಾರ್ಯಾಧ್ಯಕ್ಷ ಜಗನ್ನಾಥ ಬಂಗೇರ ಮಾತನಾಡಿ ಈ ಸಭೆ ಭಕ್ತರ ಸಭೆ ಇಲ್ಲಿ ಜನಾಭಿಪ್ರಾಯ ನೀಡಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದ ನಿಕಟಪೂರ್ವ ಸಮಿತಿ ಸದಸ್ಯ ಹಿರಿಯರಾದ ಸಂಜೀವ ಪೂಜಾರಿ ಕಲ್ಯಾಣಾಗ್ರಹಾರ ಮತ್ತು ಶ್ರೀಮತಿ ಯಶೋದ ಸಂಜೀವ ಸಪಲ್ಯ ಅವರ ಸೇವೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಮನೋಜ್ ಕೇದಿಗೆ ಸಮ್ಮಾನಿತರನ್ನು ಅಭಿನಂದಿಸಿದರು.

ಸಭೆಯಲ್ಲಿ ದಿ| ರಘು ಸಪಲ್ಯರು ಕ್ಷೇತ್ರದಲ್ಲಿ ಬ್ರಹ್ಮ ಕಲಶ ಸಮಿತಿ ಅಧ್ಯಕ್ಷರಾಗಿ, ಹಾಲಿ ಗೌರವ ಅಧ್ಯಕ್ಷರಾಗಿ ನಿರ್ವಹಿಸಿದ ಸೇವೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯ ಕೇಶವ ಪಲ್ಲತಿಲ ಉಪಸ್ಥಿತರಿದ್ದರು

ಸಹಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಅಂತರ ಸ್ವಾಗತಿಸಿ, ಕೋಶಾಧಿಕಾರಿ ಕಿಶೋರ್ ಕಲ್ಯಾಣಾಗ್ರಹಾರ ವಂದಿಸಿದರು. ರೋಹಿಣಿ ಪ್ರಮೋದ್ ಮತ್ತು ಕೃಷ್ಣಪ್ಪ ಗಾಣಿಗ ಅಂತರ ಕಾರ್ಯಕ್ರಮ ನಿರೂಪಿಸಿದರು.