ಕಳೆದ ಹತ್ತು ವರ್ಷಗಳಿಂದ ವ್ಹೀಲಿಂಗ್‌ ಒಂದು ಪಿಡುಗು ಆಗುತ್ತಿದೆ. ರಸ್ತೆಗಳಲ್ಲಿ ವ್ಹೀಲಿಂಗ್‌ ಮಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.ಕಳೆದ ಮೂರು ವರ್ಷಗಳಲ್ಲಿ ವ್ಹೀಲಿಂಗ್‌ ಸಂಬಂಧ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಚಾಲನಾ ಪರವಾನಗಿ ರದ್ದುಗೊಳಿಸಲಾಗುತ್ತಿದೆ. ವ್ಹೀಲಿಂಗ್‌ ಮಾಡಿ ಸಿಕ್ಕಿಬಿದ್ದ ಯುವಕರ ಪೋಷಕರ ಮೇಲೂ ಇನ್ನು ಮುಂದೆ ಪ್ರಕರಣ ದಾಖಲಿಸಲಾಗುವುದು. ಅಪಾಯಕಾರಿ ವ್ಹಿಲಿಂಗ್ ನಿಯಂತ್ರಿಸುವ ಸಲುವಾಗಿ ವಿಶೇಷ ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.
ಅವರು ರಾಜ್ಯ ವಿಧಾನಮಂಡಲ ಮಳೆಗಾಲ ಅಧಿವೇಶನದ ಉಭಯಸದನಗಳ ಕಾರ್ಯಕಲಾಪಗಳ ಚರ್ಚೆಯಲ್ಲಿ ಭಾಗವಹಿಸಿ,  ರಾಜ್ಯದಲ್ಲಿ ಮಾದಕ ವಸ್ತು ನಿಯಂತ್ರಣ, ಬೈಕ್ ವ್ಹೀಲಿಂಗ್ ಹಾವಳಿ ತಡೆ ಹಾಗೂ ಸೈಬರ್ ಕ್ರೈಂ ಮಟ್ಟ ಹಾಕಲು ರಾಜ್ಯ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ವಿಧಾನ ಪರಿಷತ್‌ನಲ್ಲಿ ಸದನದ ಸದಸ್ಯರಿಗೆ ಉತ್ತರಿಸಿದರು.
ಭಾರಿ ಜನಸಂಖ್ಯೆ ಸೇರುವ ಬೃಹತ್ ಕಾರ್ಯಕ್ರಮಗಳ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ರೂಪಿಸಲಾದ ‘ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ’ವನ್ನು ವಿಧಾನಸಭೆಯಲ್ಲಿ ಮಂಡಿಸಿದರು.
ಬೆಂಗಳೂರು ನಗರದಲ್ಲಿ ವ್ಹೀಲಿಂಗ್‌ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ನಮ್ಮ ಪೊಲೀಸರು ಹೆಚ್ಚು ವ್ಹೀಲಿಂಗ್‌ ನಡೆಯುವ 35 ರಸ್ತೆಗಳನ್ನು ಗುರುತಿಸಿದ್ದಾರೆ.
ಸೈಬರ್ ಅಪರಾಧ ಪತ್ತೆಗೆ ಬಿಇ, ಎಂ.ಟೆಕ್ ಇತರ ಸ್ನಾತಕೋತ್ತರ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುವುದು. ಫೋರೆನ್ಸಿಕ್ ತಂಡಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.