ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಗೃಹ ಇಲಾಖೆ ಕಠಿಣ ನಿಯಮಗಳನ್ನು ಜಾರಿ ಮಾಡಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

ವಿಧಾನ ಪರಿಷತ್ ‌ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ನಾಯಕ್‌ ಪ್ರಶ್ನೆ ಕೇಳಿದ್ರು. ಜೈಲುಗಳ ಒಳಗೆ ಅಕ್ರಮ ಚಟುವಟಿಕೆಗಳು ಹೆಚ್ಚು ನಡೆಯುತ್ತಿವೆ‌. ಜೈಲಿನಲ್ಲಿ ಅಕ್ರಮ ತಡೆಯಲು ಆಗದೇ ಹೋದರೆ ಹೇಗೆ? ಅಕ್ರಮದಲ್ಲಿ ಭಾಗಿಯಾಗುತ್ತಿರುವವರ ಮೇಲೆ ಯಾವುದೇ ಕ್ರಮ ಆಗಿಲ್ಲ. ಪರಪ್ಪನ ಅಗ್ರಹಾರದಲ್ಲಿಯೇ ಡ್ರಗ್ಸ್ ಪೂರೈಕೆ ಅಗುತ್ತಿದೆ ಎಂಬ ಆರೋಪ ‌ಇದೆ.‌ ಇದಕ್ಕೆ ಗೃಹ ಇಲಾಖೆ ಕಠಿಣ ನಿಯಮ ಜಾರಿ ಮಾಡಬೇಕು ಎಂದು ಒತ್ತಾಯ ಮಾಡಿದರು.

ಇದಕ್ಕೆ ಸಚಿವ ಪರಮೇಶ್ವರ್ ಉತ್ತರ ನೀಡಿ, ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದು ಹೊಸದಲ್ಲ. ಅನೇಕ ವರ್ಷಗಳಿಂದ ಇಂತಹ ಕೆಲಸ ನಡೆಯುತ್ತಿದೆ. ಇಡೀ ದೇಶದಲ್ಲಿ ಇಂತಹ ವ್ಯವಸ್ಥೆ ಇದೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಇದಕ್ಕಾಗಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು‌.

ತಂತ್ರಜ್ಞಾನವನ್ನ ಬಳಕೆ ಮಾಡಿಕೊಂಡು ಇಂತಹ ಚಟುವಟಿಕೆಗಳು ನಡೆಯಲು ಕ್ರಮವಹಿಸಲಾಗಿದೆ. ಜೈಲಿನಲ್ಲಿ ಗಾರ್ಡ್ಸ್ ಇರುತ್ತಿದ್ದರು. ಅವರ ಮೇಲೆ ಆರೋಪ ಬಂತು. ಈಗ ಜೈಲಿನಲ್ಲಿ KSISF ಫೋರ್ಸ್ ನಿಯೋಜನೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿಗೆ ಎರಡು ಬಾರಿ ಭೇಟಿ ಕೊಟ್ಡಿದ್ದೇನೆ. ಹೈ ರೆಸ್ಯುಲೇಷನ್ ಟವರ್ ಹಾಕಿದ್ದೇವೆ. ಜಾಮರ್ ಹಾಕಿದ್ದೇವೆ. ಕೇಂದ್ರ ಸರ್ಕಾರದಿಂದ ಜೈಲು ಆಧುನಿಕ ಮಾಡಲು ಹಣ ಬಂದಿದೆ. ಅ ಹಣವನ್ನು ಖರ್ಚು ಮಾಡಲಾಗ್ತಿದೆ. ಬೆಂಗಳೂರು ಜೈಲಿನಲ್ಲೇ 280 AI ಕ್ಯಾಮೆರಾ ಹಾಕಿದ್ದೇವೆ. ಮೈಸೂರು, ಮಂಗಳೂರು ಸೇರಿ ಎಲ್ಲಾ ಜೈಲಿನಲ್ಲಿ AI ಕ್ಯಾಮರಾ ಹಾಕಿದ್ದೇವೆ ಎಂದರು.

ಜೈಲಿನಲ್ಲಿ ಡ್ರಗ್ಸ್ ಸಪ್ಲೈ ಆಗುತ್ತೆ ಅಂತ ನಮ್ಮ ಗಮನಕ್ಕೆ ಬಂದಿದೆ. ಇದಕ್ಕಾಗಿ ಶ್ವಾನದಳ ನಿಯೋಜನೆ ಮಾಡಿದ್ದೇವೆ. ಮೊಬೈಲ್ ಫೋನ್ ಗಳನ್ನು ಹೇಗೇಗೋ ಜೈಲ್ ಗೆ ತೆಗೆದುಕೊಂಡು ಹೋಗ್ತಾರೆ. ಹೀಗಾಗಿ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ. ಈಗಾಗಲೇ 248 ಪ್ರಕರಣಗಳನ್ನ ದಾಖಲು ಮಾಡಲಾಗಿದೆ. ಸಿಬ್ಬಂದಿಗಳ ಮೇಲೆ ‌ಕ್ರಮ ಅಗಿದೆ. ಈವರೆಗೂ 22 ಅಧಿಕಾರಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.ಹಿಂಡಲಗಾ ಜೈಲಿನಿಂದ‌ ಕೇಂದ್ರ ಸಚಿವರಿಗೆ ಬೆದರಿಕೆ ಕರೆ ಹೋಗಿತ್ತು. ಅವರ ಮೇಲೂ ಕ್ರಮ ಕೈಗೊಳ್ಳಲಾಗಿದ್ದು ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲು ನಾವು ಮುಂದಾಗಿದ್ದೇವೆ ಅಂತ ತಿಳಿಸಿದರು.