ವಿಪಕ್ಷಗಳ ನಾಯಕರೂ ಸೇರಿದಂತೆ ಹಿಂದುಳಿದ ವರ್ಗಗಳ 30 ಜನ ಶಾಸಕರು ಭೇಟಿ ಮಾಡಿ, ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಅಂಗೀಕಾರ ಮಾಡಿ, ಜಾರಿಗೆ ತರಬೇಕೆಂದು ಒತ್ತಾಯಿಸಿ ಸಿ.ಎಂ.ಸಿದ್ಧರಾಮಯ್ಯ ಅವರ ಬಳಿ ಇಂದು ಮನವಿ ಸಲ್ಲಿಸಿದರು.
ಈ ಸಮೀಕ್ಷೆ ಕೇವಲ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರ ಸಮೀಕ್ಷೆ. ಇಡೀ ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದ ಪ್ರಥಮ ರಾಜ್ಯ ಕರ್ನಾಟಕ. ಅಕ್ಟೋಬರ್ 18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
2013 – 18ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್.ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯೋಗದವರು ಸಾಕಷ್ಟು ಸಮಯ ತೆಗೆದುಕೊಂಡು ಸಮೀಕ್ಷೆ ನಡೆಸಿದ್ದಾರೆ. ರಾಜ್ಯದ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿರುವುದಾಗಿ ಕಾಂತರಾಜು ಅವರು ತಿಳಿಸಿದ್ದಾರೆ. ನಾನು ಇಲ್ಲಿಯವರೆಗೂ ವರದಿಯನ್ನು ಪರಿಶೀಲಿಸಿಲ್ಲ ಎಂದರು.
ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂತರಾಜು ವರದಿ ಪೂರ್ಣಗೊಂಡಿರಲಿಲ್ಲ. ಆದ್ದರಿಂದ ನನ್ನ ಅವಧಿಯಲ್ಲಿ ಜಾತಿ ಗಣತಿ ವರದಿಯನ್ನು ಸ್ವೀಕರಿಸಲು ಮತ್ತು ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. ನಂತರ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕಾಂತುರಾಜು ಅವರು ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದರು. ಆದರೆ ಕುಮಾರಸ್ವಾಮಿಯವರು ವರದಿ ಸ್ವೀಕರಿಸಲು ಒಪ್ಪಿರಲಿಲ್ಲ. ನಂತರ ಬಿಜೆಪಿ ಸರ್ಕಾರ ಬಂದರೂ, ವರದಿಯನ್ನು ಸ್ವೀಕರಿಸಲಿಲ್ಲ.
ಕಾಂತರಾಜು ಅವರ ಅಧ್ಯಕ್ಷಾವಧಿ ಪೂರ್ಣಗೊಂಡ ನಂತರ ಜಯಪ್ರಕಾಶ್ ಹೆಗ್ಗಡೆಯವರು ಆಯೋಗದ ಅಧ್ಯಕ್ಷರಾದರು. ಅವರು ಕೋರಿದಂತೆ ವರದಿ ಸಲ್ಲಿಕೆಗೆ ಮೂರು ತಿಂಗಳ ಅವಕಾಶ ಕೊಡಲಾಗಿತ್ತು. ನಂತರ ಆ ವರದಿಯನ್ನು ಸ್ವೀಕರಿಸಲಾಗಿದೆ. ಸ್ವೀಕರಿಸಿದ ವರದಿಯನ್ನು ಜಾರಿಗೊಳಿಸಲು ಎಲ್ಲರಿಂದಲೂ ಒತ್ತಾಯ ಬಂದಿದೆ. ಈ ಹಿನ್ನಲೆಯಲ್ಲಿ ಇಂದು ಹಿಂದುಳಿದ ವರ್ಗಗಳ ಶಾಸಕರು ಸಭೆ ನಡೆಸಿ ವರದಿಯನ್ನು ಜಾರಿಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಮೈಸೂರಿನ ಒಂದು ಕಾರ್ಯಕ್ರಮದಲ್ಲಿ ನಾನು ತಿಳಿಸಿದಂತೆ, ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಸ್ವೀಕರಿಸಲಾಗಿದ್ದು, ಈ ವರದಿಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದೆ. ಅಕ್ಟೋಬರ್ 18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಬಹುತೇಕ ಮಂಡಿಸುವ ಸಾಧ್ಯತೆಯಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.