ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ “ಗಗನಚುಕ್ಕಿ ಜಲಪಾತೋತ್ಸವ – 2024” ಅನ್ನು ಸಿ.ಎಂ.ಸಿದ್ಧರಾಮಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಇಲ್ಲಿನ ಶಾಸಕರು ಕೇಳಿದಾಗೆಲ್ಲಾ ಅಗತ್ಯವಿದ್ದಷ್ಟು ಅನುದಾನ ನೀಡುತ್ತಲೇ ಇದ್ದೇವೆ. ರಾಜ್ಯದ ಜನರ ಆರ್ಥಿಕ ಪ್ರಗತಿ, ಸಾಮಾಜಿಕ ನ್ಯಾಯ ಮತ್ತು ನಾಡಿನ ಸಮಗ್ರ ಪ್ರಗತಿ ವಿಚಾರದಲ್ಲಿ ರಾಜಿಯೇ ಇಲ್ಲ. ರಾಜ್ಯದ ಎಲ್ಲಾ ಜಾತಿ, ಎಲ್ಲಾ ವರ್ಗ, ಎಲ್ಲಾ ಧರ್ಮದ ಜನರಿಗೆ ಆರ್ಥಿಕ ಶಕ್ತಿ ಕೊಡುವುದು ನಮ್ಮ ಗುರಿಯಾಗಿದೆ. ಐದೂ ಯೋಜನೆಗಳ ಲಾಭವನ್ನು ಎಲ್ಲಾ ಜಾತಿಯ ಬಡವರು ಮತ್ತು ಮಧ್ಯಮ ವರ್ಗದವರಿಗೆ ತಲುಪಿಸಿದ್ದು ಈ ಸಿದ್ದರಾಮಯ್ಯ ಎಂದರು.

ಗಗನಚುಕ್ಕಿ-ಭರಚುಕ್ಕಿ ಜಲಪಾತಗಳನ್ನು ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಗೊಳಿಸಲಾಗುವುದು‌. ಅಗತ್ಯವಿದ್ದಷ್ಟು ಹಣ ನೀಡಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು.

ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ರಾಜ್ಯದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಅಗತ್ಯವಾದ ಆಕರ್ಷಕವಾದ ನೂರಾರು ಸ್ಥಳಗಳಿವೆ. ಇವುಗಳ ಬೆಳವಣಿಗೆಗೆ ಎಷ್ಟು ಬೇಕಾದರೂ ಹಣ ಕೊಡಲು ಸರ್ಕಾರ ಸಿದ್ಧವಿದೆ.
ದೇಶಕ್ಕೆ ಅತಿ ಹೆಚ್ವು ತೆರಿಗೆ ನೀಡುವ ರಾಜ್ಯ ಕರ್ನಾಟಕ. ಪ್ರವಾಸೋದ್ಯಮ ಬೆಳವಣಿಗೆಗೆ ಪ್ರಕೃತಿದತ್ತವಾದ ಪೂರಕ ವಾತಾವರಣವಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ರಾಜ್ಯದ ಆರ್ಥಿಕ ಪ್ರಗತಿಯೂ ಆಗುತ್ತದೆ.

ವಿಸಿ ನಾಲೆಯ ಕೊನೆ ಭಾಗಕ್ಕೆ ನೀರು ತಲುಪಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸಲು ಕಾವೇರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ನಿಲ್ಲಿಸಲು ಪಿತೂರಿ ಮಾಡುತ್ತಿರುವವರು ಕೇಂದ್ರದಿಂದ ಹಣ ತಂದು ಮಂಡ್ಯದ ಅಭಿವೃದ್ಧಿಗೆ ಕೆಲಸ ಮಾತ್ರ ಮಾಡುತ್ತಿಲ್ಲ. ಆದ್ದರಿಂದ ಕೇವಲ ಮಾತಾಡಿಕೊಂಡು ಕಾಲ ಕಳೆಯುವವರಿಗೆ ರೈತರು, ಹಿಂದುಳಿದವರು, ದಲಿತರ ಪರವಾದ ಕಾಳಜಿಯೇ ಇಲ್ಲ ಎನ್ನುವುದು ಸಾಬೀತಾಗಿದೆ.

ರಾಜ್ಯದಲ್ಲಿ ಕೃಷಿ ಇಲಾಖೆ, ನೀರಾವರಿ ಇಲಾಖೆ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಹಿಂದುಳಿದ ವರ್ಗಗಳ ಇಲಾಖೆ, ಲೋಕೋಪಯೋಗಿ ಇಲಾಖೆಯ ಎಲ್ಲಾ ಕೆಲಸಗಳೂ ನಡೆಯುತ್ತಿವೆ. ಯಾವುದೇ ಇಲಾಖೆಯ ಒಂದೂ ಕೆಲಸವೂ ಸ್ಥಗಿತಗೊಂಡಿಲ್ಲ. ಆದ್ದರಿಂದ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಸುಳ್ಳಿನ ಸರದಾರರ ಮಾತಿಗೆ ಬೆಲೆ ಕೊಡಬೇಡಿ.

ಪೂರಿಗಾಲಿ ಏತನೀರಾವರಿ ಯೋಜನೆಯನ್ನು ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಆರಂಭಿಸಿದ್ದೆ. ಈ ಯೋಜನೆಯನ್ನು ನಾನೇ ಉದ್ಘಾಟಿಸುತ್ತೇನೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.

ಮಳವಳ್ಳಿ ಶಾಸಕ ನರೇಂದ್ರಸ್ವಾಮಿಯವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಶಾಸಕರುಗಳಾದ ಮಾಗಡಿ ಬಾಲಕೃಷ್ಣ, ಕೊಳ್ಳೇಗಾಲ ಕೃಷ್ಣಮೂರ್ತಿ, ಹನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಸುದಾಮ್ ದಾಸ್, ಪ್ರಕಾಶ್ ರಾಥೋಡ್, ದಿನೇಶ್ ಗೂಳಿಗೌಡ, ಹಿರಿಯ IPS ಅಧಿಕಾರಿಗಳಾದ ಅರುಣ್ ಚಕ್ರವರ್ತಿ, ನಂಜುಂಡಸ್ವಾಮಿ ಮತ್ತು ಮುಖಂಡರಾದ ಮಳವಳ್ಳಿ ಶಿವಣ್ಣ ಸೇರಿ ಹಲವರು ಉಪಸ್ಥಿತರಿದ್ದರು.