ಬಂಟ್ವಾಳ: ಜನರಿಗೆ ಆರೋಗ್ಯ ಭಾಗ್ಯ ಇದ್ದಾಗ ಸಕಲೈಶ್ವರ್ಯವೂ ದೊರೆತಂತೆ, ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಬಡವರ ಪಾಲಿಗೆ ಸ್ವರ್ಗವಾಗಿದ್ದು ಸೇವಾ ಕಾರ್ಯದ ಮೂಲಕ ಜನರಿಗೆ ಸ್ಪಂದನೆಯನ್ನು ನೀಡುತ್ತಿದೆ. ದೀನ ದುರ್ಬಲರ, ರೋಗಿಗಳ ಸೇವೆ ಮಾಡುವ ಮೂಲಕ ಆದರ್ಶ ಕೆಲಸವನ್ನು ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಹೇಳಿದರು. ಇದನ್ನೂ ಓದಿ : ಸಿದ್ಧಕಟ್ಟೆ ಬಿಲ್ಲವ ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ ಸಮಾಜ ಸೇವಕ ಕಿರಣ್ ಮಂಜಿಲ ಆಯ್ಕೆ
ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಿಸಿ ಮಾತನಾಡಿದರು.
ಇಂದಿನ ದಿನದಲ್ಲಿ ನಾವು ಸೇವಿಸುವ ಆಹಾರ ವಿಷಯುಕ್ತವಾಗುತ್ತಿದೆ ಯೋಗ, ಪ್ರಾಣಯಾಮದ ಮೂಲಕ ಆರೋಗ್ಯ ರಕ್ಷಣೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂದು ಕ್ಷಯ ರೋಗಿಗಳು ರೋಗದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ , ಚಿಕಿತ್ಸೆಯ ಜೊತೆಗೆ ಪೌಷ್ಟಿಕಾಹಾರ ಸೇವನೆ ಮಾಡಿದಾಗ ರೋಗ ನಿವಾರಣೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು. ಜನಜಾಗೃತಿ ವೇದಿಕೆ ಸದಸ್ಯ ಸದಾನಂದ ಆಳ್ವ ಕಂಪ ಮಾತನಾಡಿ ಹಿಂದೆ ಭಾರತದಲ್ಲಿ ಕ್ಷಯ ರೋಗಿಗಳ ಸಂಖ್ಯೆ ಜಾಸ್ತಿ ಇದ್ದು ರೋಗಿಗಳನ್ನು ದೂರ ಇಡುವ ಪ್ರಯತ್ನ ನಡೆಯುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಕ್ಷಯ ಮುಕ್ತ ಭಾರತ ನಿರ್ಮಾಣದ ಯೋಜನೆಯಂತೆ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಸಂಪತ್ತು, ವಿದ್ಯೆ ಇದ್ದರೂ ಆರೋಗ್ಯ ಇಲ್ಲದೆ ಇದ್ದರೆ ಎಲ್ಲವೂ ವ್ಯರ್ಥ ಎಂದು ತಿಳಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಈವರೆಗೆ 170 ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸಲಾಗಿದ್ದು 11 ಲಕ್ಷ ರೂ. ಹಣ ಖರ್ಚು ಮಾಡಲಾಗಿದೆ, ಆಶಾಕಾರ್ಯಕರ್ತೆಯರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಪ್ರಮುಖರಾದ
ಪದ್ಮನಾಭ ಕಿದೆಬೆಟ್ಟು, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ ಮೋಹನ್ ಸಾಲ್ಯಾನ್ ಬೆಂಜನಪದವು, ಶಿವರಾಜ್ ಸುಜೀರು ಗಾಯತ್ರಿ ಚಿದಾನಂದ , ಚಂದ್ರಹಾಸ ತುಂಬೆ, ಮಲ್ಲಿಕಾ ಅಮಿತಾ ಉಪಸ್ಥಿತರಿದ್ದರು. ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.