ಕಲ್ಲಡ್ಕ: ಶಿಕ್ಷಣವು ವೈಜ್ಞಾನಿಕತೆಯ ಜೊತೆಯಲ್ಲಿ ಬೆಳೆದು ಸಂಸ್ಕೃತಿಯ ಬೇರುಗಳಿಂದ ಗಟ್ಟಿಯಾದಾಗ ಉತ್ತಮ ಸಂಸ್ಕಾರಯುತ ಪ್ರಜೆಯನ್ನು ಕಾಣಬಹುದು. ಒಂದು ವಿದ್ಯಾಸಂಸ್ಥೆಯು ಊರಿಗೊಂದು ಕಳಶವಿದ್ದಂತೆ ಅದಕ್ಕೆ ಸ್ಪಂದಿಸುವ ಹಲವಾರು ಕೈಗಳಿಂದ ಅಭಿವೃದ್ಧಿಯನ್ನು ಹೊಂದುತ್ತಾ ಸಾಗುತ್ತದೆ ಎಂದು ಸುರತ್ಕಲ್ ಶ್ರೀ ಮಾತಾ ಡೆವಲಪ್ಪೆರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ವೀರಕಂಬ ಮಜಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ 2024 -25 ನೇ ಸಾಲಿನ ಶಿಕ್ಷಕ ರಕ್ಷಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನನ್ನ ಶಾಲೆ ಎಂಬ ಭಾವನೆಯು ಎಲ್ಲರಲ್ಲಿ ಮೂಡಿದಾಗ ಪೋಷಕರು ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ಯಾರ್ಥಿಗಳ ನಡುವಿನ ಬಂಧವು ಬಿಗಿಯಾಗುತ್ತದೆ ಆಗ ಉತ್ತಮ ಫಲಿತಾಂಶ ದೊರಕಲು ಸಾಧ್ಯವಾಗುತ್ತದೆ.

ಸರ್ವಧರ್ಮಿಯ ಮಕ್ಕಳು ಒಂದೇ ಕಡೆ ಸೇರಿ ಸಮಾನತೆಯನ್ನು ಮೆರೆಯಲು ಶಾಲೆಗಳೇ ಮುಖ್ಯ ಅವಕಾಶವನ್ನು ಕಲ್ಪಿಸುತ್ತದೆ ಎಂದರು. ಬಳಿಕ ಪ್ರತಿ ವರ್ಷದಂತೆ ಸದರಿ ವರ್ಷವೂ ಪೂರ್ವ ಪ್ರಾಥಮಿಕ ಮಕ್ಕಳಿಗೆ ಸಮವಸ್ತ್ರವನ್ನು ಸಾಂಕೇತಿಕವಾಗಿ ವಿತರಿಸಿದರು.

ಪೋಷಕರು ವಿದ್ಯಾರ್ಥಿಗಳ ದಿನನಿತ್ಯದ ಕಲಿಕೆಯನ್ನು ವಿಮರ್ಶಿಸಿ ಮುತುವರ್ಜಿಯಿಂದ ಗಮನ ಹರಿಸಬೇಕು ತಮ್ಮ ಮಕ್ಕಳ ವಿಚಾರದಲ್ಲಿ ಪೋಷಕನಾಗಿ ಸ್ನೇಹಿತನಾಗಿ ಇದ್ದು ಅವರ ಮಾನಸಿಕ ತುಮಲಗಳಿಗೆ ಧೈರ್ಯ ತುಂಬಬೇಕು. ಶಾಲೆಯ ವಿಚಾರವಾಗಿ ಶಿಕ್ಷಕರ ಮತ್ತು ಪೋಷಕರ ನಡುವಿನ ತೆರೆಯನ್ನು ಸರಿಸಿ ನನ್ನ ಮಗುವಿನ ಕಲಿಕೆಯ ಕೇಂದ್ರ ಶಿಕ್ಷಕರೇ ನನ್ನ ಮಗುವಿನ ಎರಡನೇ ಪೋಷಕರು ಎಂದು ಮನದಟ್ಟು ಮಾಡಿಕೊಂಡು ಜೊತೆಯಾಗಿ ಕೈಜೋಡಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರೇಣುಕಾ ಕಣಿಯೂರು ಅವರು ಶಿಕ್ಷಕರಕ್ಷಕ ಸಭೆಯಲ್ಲಿ ಶಾಲಾ ವಿಚಾರಗಳು ಪೋಷಕರ ಜವಾಬ್ದಾರಿಗಳು ಮುಂತಾದ ವಿಷಯಗಳ ಬಗ್ಗೆ ಮಾತನಾಡಿ ಒಂದು ಮಗುವಿನ ಉನ್ನತಿಗೆ ಕೇವಲ ವಿದ್ಯಾಸಂಸ್ಥೆಗಳು ಶಿಕ್ಷಕರು ಮಾತ್ರ ಕಾರಣರಲ್ಲ ಜೊತೆಗೆ ಪ್ರಜ್ಞಾವಂತ ಪೋಷಕರು ಕಾರಣರಾಗಿರುತ್ತಾರೆ ನನ್ನದು ಎಂಬ ಭಾವನೆ ಬಂದಾಗ ಅದರ ಬಗ್ಗೆ ಒಲುಮೆ ತನ್ನಿಂದ ತಾನೇ ಮೂಡುತ್ತದೆ ಪ್ರತಿ ವಿಚಾರಗಳಲ್ಲೂ ಮಗುವಿನ ಜೊತೆಗೆ ಶಿಕ್ಷಕರೊಂದಿಗೆ ಸಹಕಾರವನ್ನು ನೀಡಬೇಕು ಮಗು ಎಲ್ಲಾ ವಿಚಾರಗಳನ್ನು ಅನುಕರಣೆಯಿಂದ ಕಲಿಯುವುದು ಆಗ ಪೋಷಕರು ತನ್ನ ಉತ್ತಮ ನಡವಳಿಕೆಯನ್ನೇ ಬಿಂಬಿಸಬೇಕಾಗುತ್ತದೆ.

ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಈಶ್ವರ ಭಟ್ ರಾಟೋಡ್ ಅವರು ಶಾಲೆ ಮತ್ತು ಹಿರಿಯ ವಿದ್ಯಾರ್ಥಿಗಳ ನಡುವಿನ ಸಂಬಂಧ ಉತ್ತಮವಾಗಿರಬೇಕು ಇಲ್ಲಿ ಕಲಿತು ಹೋದ ಮೇಲೂ ಶಾಲೆ ಬಗ್ಗೆ ಅಭಿಮಾನವನ್ನು ಹೊಂದಿರಬೇಕು ನಮ್ಮ ಅಭಿವೃದ್ಧಿಗೆ ಸಾಧನೆಗೆ ಕಾರಣವಾದ ಶಿಕ್ಷಕರು ಮತ್ತು ಶಾಲೆಯನ್ನು ಮರೆಯಬಾರದು ಕಿಂಚಿತ್ತಾದರೂ ಸಾಧ್ಯವಾದ ಕೊಡುಗೆಗಳನ್ನು ನೀಡಿ ಸಹಕಾರವನ್ನು ಕೊಡುವುದು ಉತ್ತಮ ಗುಣವಾಗಿದೆ ಎಂದು ತಿಳಿಸುತ್ತಾ ತನ್ನ ಪಿಂಚಣಿಯನ್ನು ಶಾಲೆಗೆ ನೀಡುವುದಾಗಿ ಭರವಸೆಯನ್ನು ನೀಡಿ ಮಾತನಾಡಿದರು.

ಶಿಕ್ಷಕರು ಮಕ್ಕಳ ಪ್ರಾಥಮಿಕ ಹಂತದಲ್ಲಿಯೇ ಆಸಕ್ತಿಯನ್ನು ಗುರುತಿಸಿ ಬೆಳೆಸುವ ಜವಾಬ್ದಾರಿಯನ್ನು ಹೊಂದಿದೆ ಈ ರೀತಿಯಾಗಿ ಮಗುವಿನ ಉನ್ನತಿಗೆ ಶಿಕ್ಷಕರೊಂದಿಗೆ ಪೋಷಕರು ಕೂಡ ಸಾಧನೆ ಮಾಡಲು ಮೆಟ್ಟಿಲುಗಳಾಗಿ ಸಹಾಯ ಮಾಡಬೇಕು ಆಗ ಎಲ್ಲಾ ಕಠಿಣ ಕೆಲಸಗಳು ಸುಲಭವಾಗಿ ನೆರವೇರಲು ಸಾಧ್ಯ ಎಂಬುದಾಗಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ರಾಮ್ ಪ್ರಸಾದ್ ಕೊಂಬಿನ ಇವರು ಮಾತನಾಡಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರ ಸಹಕಾರದಿಂದ ಅಭಿವೃದ್ಧಿದಾಯಕ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಹಾಯವು ದೇವರಿಗೆ ಪ್ರಿಯವಾದದ್ದು ಸಂಘ ಸಂಸ್ಥೆಗಳು ಹಿರಿಯ ವಿದ್ಯಾರ್ಥಿಗಳು ಶಾಲೆಯ ಉನ್ನತಿಗೆ ಶ್ರಮಿಸಿದಾಗ ಎಲ್ಲಾ ಕೆಲಸಗಳು ನಿರಾಯಾಸವಾಗಿ ನಡೆಯುತ್ತವೆ ಎಂದರು.

ಈ ಸಂದರ್ಭದಲ್ಲಿ ಶಾಲೆಗೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಹೊಸದಾಗಿ ಆಯ್ಕೆಯಾದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರನ್ನು ಅಭಿನಂದಿಸಲಾಯಿತು.

ಶಾಲೆಯು ಪರಿಸರ ಕಾಳಜಿಯನ್ನು ಹೊಂದಿದೆ ಎಂಬುದನ್ನು ಮನಗಂಡು ಅರಣ್ಯ ಇಲಾಖೆಯವರು ವಿವಿಧ ರೀತಿಯ ಸಸಿಗಳನ್ನು ನೀಡಿದ್ದು ಅದನ್ನು ಪೋಷಕರಿಗೆ ವಿತರಿಸಲಾಯಿತು ಹಾಗೂ ಅದರ ಪೋಷಣೆಯ ಜವಾಬ್ದಾರಿಯನ್ನು ಮಕ್ಕಳಿಗೆ ನೀಡಿ ಬೆಳೆಸಬೇಕೆಂದು ತಿಳಿಸಲಾಯಿತು.

ಶಾಲಾ ವಿದ್ಯಾರ್ಥಿಗಳ ಸಭಾ ಕಂಪನವನ್ನು ದೂರ ಮಾಡಲು ಮೈಕಿನ ವ್ಯವಸ್ಥೆಯನ್ನು ಮಾಡಿದ್ದು ಅದನ್ನು ದೇಣಿಗೆಯಾಗಿ ವಿಟ್ಲ ಗ್ರಾಮೀಣ ಬ್ಯಾಂಕ್ ನೀಡಿದ್ದು, ಬ್ಯಾಂಕಿನ ನಿರ್ದೇಶಕರಾದ ವಿಶ್ವನಾಥ ಎಂ. ಅವರು ಹಸ್ತಾಂತರಿಸಿದರು.

ಬಳಿಕ ಪೋಷಕರೊಂದಿಗೆ ಶಾಲಾ ಅಭಿವೃದ್ಧಿ ಬಗ್ಗೆ ಮುಕ್ತವಾಗಿ ಚರ್ಚಿಸಿ ಸೂಕ್ತ ಸಲಹೆ ಪಡೆಯಲಾಯಿತು.

ಈ ಸಂಧರ್ಭದಲ್ಲಿ ಶಾಲಾ ಸ್ವಚ್ಛತೆ ಪರಿಶೀಲನಾ ತಂಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಾಗೂ ಪಂಚಾಯತ್ ಕಾರ್ಯಧರ್ಶಿ ಜೊತೆ ಆಗಮಿಸಿ ಶಾಲಾ ಸ್ವಚ್ಛತೆಯನ್ನು ಪರಿಶೀಲಿಸಿ ಪೋಷಕರಿಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಪಠ್ಯತರ ಚಟುವಟಿಕೆಗಳಾದ ಕರಾಟೆ, ಭರತನಾಟ್ಯ ಬಗ್ಗೆ ಸಂಬಂಧಪಟ್ಟ ಗುರುಗಳು ಆಗಮಿಸಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪೋಷಕರಿಗೆ ಮನವರಿಕೆ ಮಾಡಿದರು.

ಕಾರ್ಯಕ್ರಮದಲ್ಲಿ ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ, ಎಸ್‌ಡಿಎಂಸಿ ಸದಸ್ಯರು,ಶಾಲಾ ಪೋಷಕರು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾಥಿಸಿ,ಶಿಕ್ಷಕಿ ಅನುಷಾ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ ರವರು ಪ್ರಸ್ತಾವಿಕ ಮಾತುಗಳನ್ನಾನಡಿದರು. ಶಿಕ್ಷಕಿ ಮಮತಾ ದಾನಿಗಳ ಪಟ್ಟಿ ವಾಚಿಸಿ, ಶಿಕ್ಷಕಿ ಸಂಗೀತ ಶರ್ಮಾ ಧನ್ಯವಾದ ನೀಡಿ ಕಾರ್ಯಕ್ರಮ ನಿರೂಪಿಸಿದರು.