ಮಾಸ್ಕೋ/ಕೈವ್: ಅತ್ತ ಇರಾನ್-ಇಸ್ರೇಲ್ ಯುದ್ಧಕ್ಕೆ ಕದನ ವಿರಾಮ ಬಿದ್ದ ಬೆನ್ನಲ್ಲೇ ಇತ್ತ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ತೀವ್ರಗೊಂಡಿದೆ. ರಾತ್ರೋರಾತ್ರಿ ಉಕ್ರೇನ್ ಮೇಲೆ ರಷ್ಯಾ ಅತಿದೊಡ್ಡ ವಾಯುದಾಳಿ ನಡೆಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಬರೋಬ್ಬರಿ 477 ಡ್ರೋನ್‌ಗಳು ಹಾಗೂ 60 ಮಿಸೈಲ್‌ಗಳಿಂದ ರಷ್ಯಾ ದಾಳಿ ನಡೆಸಿರುವುದಾಗಿ ವರದಿಗಳು ತಿಳಿಸಿವೆ.
ಹೌದು. ಯುದ್ಧ ಆರಂಭವಾದ ಬಳಿಕ ರಷ್ಯಾ ರಾತ್ರೋರಾತ್ರಿ ನಡೆಸಿದ ಅತಿದೊಡ್ಡ ವೈಮಾನಿಕ ದಾಳಿ ಇದಾಗಿದೆ. ಉಕ್ರೇನ್ ಮೇಲೆ ರಷ್ಯಾ 537 ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದ್ದು, ಇವುಗಳಲ್ಲಿ 477 ಡೋನ್ (Drone) ಹಾಗೂ 60 ಕ್ಷಿಪಣಿಗಳು ಸೇರಿವೆ. ಆದ್ರೆ ಕ್ಷಿಪಣಿ, ಡ್ರೋನ್ ಸೇರಿದಂತೆ 249 ಶಸ್ತ್ರಾಸ್ತ್ರಗಳನ್ನು ಹೊಡೆದುರುಳಿಸಲಾಗಿದೆ. ಇನ್ನು ಕೆಲವನ್ನು ಎಲೆಕ್ಟ್ರಾನಿಕ್ ಜಾಮರ್ ಮೂಲಕ ತಡೆಹಿಡಿಯಲಾಯಿತು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (Volodymyr Zelensky) ಹೇಳಿದ್ದಾರೆ. ಇದನ್ನೂ ಓದಿ : ಪಾಲಿಟ್ರಾಮಾ ಕೇಂದ್ರವನ್ನು ಸ್ಥಾಪಿಸಲು ಅನುಮೋದನೆ ಕೊಟ್ಟ ಪ್ರಧಾನಿ ಮೋದಿ
ರಷ್ಯಾದ ದಾಳಿಯನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ತನ್ನ ದೇಶದ F-16 ಯುದ್ಧ ವಿಮಾನದ ಪೈಲಟ್ ಮ್ಯಾಕ್ಸಿಮ್ ಉಸ್ಟೆಂಕೊ ಸಾವನ್ನಪ್ಪಿರುವುದಾಗಿ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ. ಆದ್ರೆ ಪೈಲಟ್ ಸಾಯುವುದಕ್ಕೂ ಮುನ್ನ 7 ವಾಯುಗುರಿಗಳನ್ನ ನಾಶಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ರಷ್ಯಾವು ಉಕ್ರೇನ್ ಮೇಲೆ ಪ್ರಯೋಗಿಸಿದ 477 ಡ್ರೋನ್‌ಗಳ ಪೈಕಿ ಹೆಚ್ಚಿನವುಗಳು ಇರಾನ್ ನಿರ್ಮಿತ ʻಶಹೇದ್ʼ ಡ್ರೋನ್‌ಗಳಾಗಿವೆ. ದಾಳಿಯಿಂದ ಸ್ಮಿಲಾದಲ್ಲಿನ ವಸತಿ ಕಟ್ಟಡಕ್ಕೆ ಹಾನಿಯಾಗಿದ್ದು, ಒಂದು ಮಗು ಗಾಯಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವಾರದಲ್ಲಿ ರಷ್ಯಾ 114ಕ್ಕೂ ಹೆಚ್ಚು ಮಿಸೈಲ್‌ಗಳು, 1,270ಕ್ಕೂ ಹೆಚ್ಚು ಡ್ರೋನ್, 1,100 ಗ್ಲೈಡ್ ಬಾಂಬ್‌ಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸಿದೆ ಎಂದು ತಿಳಿದುಬಂದಿದೆ. 2022ರಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿಯನ್ನು ರಷ್ಯಾ ಪ್ರಾರಂಭಿಸಿತ್ತು. ಆ ಬಳಿಕ ನಡೆದ ಅತಿದೊಡ್ಡ ದಾಳಿ ಇದೆನ್ನಲಾಗಿದೆ. ಶಾಂತಿ ಮಾತುಕತೆಗೆ ಸಿದ್ಧವಾಗಿದ್ದೇವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆಯ ಬೆನ್ನಲ್ಲೇ ಈ ದಾಳಿ ನಡೆದಿದೆ ಎನ್ನಲಾಗಿದೆ. ಮತ್ತೊಂದೆಡೆ ಉಕ್ರೇನಿನ ಮೂರು ಡೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.