ಲಂಡನ್: ಮಾಜಿ ಪ್ರಧಾನಿ ರಿಷಿ ಸುನಕ್ (Rishi Sunak) ಅವರ ವಿದಾಯ ಭಾಷಣದ ವೇಳೆ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರ ಡ್ರೆಸ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅಲ್ಲದೇ ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಟಿಷ್ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ರಿಷಿ ಸುನಕ್ ಅವರು ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯ ಹೊರಗೆ ತಮ್ಮ ವಿದಾಯ ಭಾಷಣ ಮಾಡಿದರು. ಈ ವೇಳೆ ಪತ್ನಿ ಅಕ್ಷತಾ ಮೂರ್ತಿಯವರು ಪತಿಯ ಹಿಂದೆ ಶಾಂತವಾಗಿ ನಿಂತು ಭಾಷಣ ಕೇಳುತ್ತಿರುವುದು ಕಂಡುಬಂತು. ಆದರೆ ಅಕ್ಷತಾ ಮೂರ್ತಿ ಪತಿಯ ವಿದಾಯ ಭಾಷಣದ ವೇಳೆ ಧರಿಸಿದ್ದ ಡ್ರೆಸ್ (Akshata Murthy Dress) ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಕ್ಷತಾ ಅವರ ಈ ಉಡುಗೆ ಸಾಕಷ್ಟು ಟ್ರೋಲ್ ಆಗುತ್ತಿದೆ.
ಡ್ರೆಸ್ ಟ್ರೋಲ್ ಯಾಕೆ..?: ಅಕ್ಷತಾ ಅವರು ಕಡು ನೀಲಿ, ಬಿಳಿ ಮತ್ತು ಕೆಂಪು ಬಣ್ಣವಿರುವ ಉಡುಪನ್ನು ಧರಿಸಿದ್ದರು. ಸುನಕ್‌ನ ಭಾಷಣದ ಸಮಯದಲ್ಲಿ ಎಲ್ಲರ ಕಣ್ಣುಗಳು ಅಕ್ಷತಾ ಉಡುಪಿನತ್ತ ವಾಲಿದೆ. ಈ ಡ್ರೆಸ್ ಬೆಲೆ 395 ಪೌಂಡ್ ಅಂದರೆ ಬರೋಬ್ಬರಿ 42 ಸಾವಿರ ರೂಪಾಯಿ ಆಗಿರುತ್ತದೆ. ಹಾಗಾದ್ರೆ ಈ ಡ್ರೆಸ್‌ನಲ್ಲಿ ಏನಿತ್ತು? ಟ್ರೋಲ್‌ಗೆ ಏಕೆ ಕಾರಣವಾಯಿತು? ಎಂಬುದನ್ನು ನೋಡೋದಾದ್ರೆ ವಾಸ್ತವವಾಗಿ ನೀಲಿ, ಬಿಳಿ ಮತ್ತು ಕೆಂಪು ಬಣ್ಣಗಳು ಬ್ರಿಟಿಷ್ ಧ್ವಜವನ್ನು ಹೋಲುತ್ತವೆ.
ಅಕ್ಷತಾ ಧರಿಸಿರುವ ಡ್ರೆಸ್ ಕೆಂಪು, ನೀಲಿ ಮತ್ತು ಬಿಳಿ ಪಟ್ಟೆಗಳನ್ನು ಹೊಂದಿತ್ತು. ಅವುಗಳು ಟೋರಿ ಧ್ವಜದ (The Tory Flag) ಬಣ್ಣಗಳಾಗಿವೆ. ಹೀಗಿರುವಾಗ ಅಕ್ಷತಾ ಮೂರ್ತಿ ಈ ಡ್ರೆಸ್ ತೊಡುವ ಮೂಲಕ ಟೋರಿಯ ಸದ್ಯದ ಪರಿಸ್ಥಿತಿಯನ್ನು ಬಿಂಬಿಸಿದ್ದಾರೆ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ.
ಸದ್ಯ ಅಕ್ಷತಾ ಡ್ರೆಸ್ ಸಾಕಷ್ಟು ಚರ್ಚೆಗೆ ಮಾತ್ರವಲ್ಲದೇ ಟ್ರೋಲ್ ಆಗುತ್ತಿದೆ. ಅಕ್ಷತಾ ಮೂರ್ತಿ ಅವರ ಉಡುಗೆ ಸ್ಟೀರಿಯೋಗ್ರಾಮ್ ಆಗಿದೆ ಎಂದು ಓರ್ವ ಬಳಕೆದಾರ ಹೇಳಿದರೆ, ಇನ್ನೊಬ್ಬ ಈ ಡ್ರೆಸ್ ಅನ್ನು ತುಂಬಾ ದೂರದಿಂದ ನೀವು ನೋಡಿದರೆ, ʼನೀವು ಕ್ಯಾಲಿಫೋರ್ನಿಯಾಗೆ ಹಾರುತ್ತಿರುವ ವಿಮಾನವನ್ನು ನೋಡುತ್ತೀರಿ’ ಎಂದು ಹೇಳಿದ್ದಾರೆ. ಹೀಗೆ ಹಲವಾರು ಮಂದಿ ಡ್ರೆಸ್ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.