ಗಾಂಧೀನಗರ್: ಗುಜರಾತ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು ಹಲವು ಜಿಲ್ಲೆಗಳಿಗೆ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಹವಾಮಾನ ಇಲಾಖೆ ಪ್ರವಾಹ ಪರಿಸ್ಥಿತಿ ನಡುವೆ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 22 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಕಚ್ಛ್, ದ್ವಾರಕಾ, ಜಾಮ್‌ನಗರ, ಮೊರ್ಬಿ, ಸುರೇಂದ್ರನಗರ, ಜುನಾಗಢ್, ರಾಜ್‌ಕೋಟ್, ಬೊಟಾಡ್, ಗಿರ್ಸೋಮನಾಥ್, ಅಮ್ರೇಲಿ ಮತ್ತು ಭಾವನಗರ ಸೇರಿದಂತೆ ಸೌರಾಷ್ಟ್ರ ಪ್ರದೇಶಗಳಿಗೆ ರೆಡ್ ಅಲರ್ಟ್, ಮಧ್ಯ ಗುಜರಾತ್ ಮತ್ತು ದಕ್ಷಿಣ ಗುಜರಾತ್‌ಗೆ ಹಳದಿ ಅಲರ್ಟ್ ಘೋಷಿಸಿದೆ.

ಭಾರೀ ಮಳೆಯಿಂದಾಗಿ ಗುಜರಾತ್‌ನ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. 23,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು 300 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಈಗಾಗಲೇ 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತುಕಡಿಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ 22 ತುಕಡಿಗಳನ್ನು ನಿಯೋಜಿಸಲಾಗಿದೆ.