ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರಿಗೂ ನವರಾತ್ರಿಯ ಶುಭಾಶಯ ಕೋರಿದರು. ಬಿಹಾರದ ಮಹಿಳೆಯರೊಂದಿಗೆ ಈ ಆಚರಣೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯನ್ನು ಇಂದು ಪ್ರಾರಂಭಿಸಲಾಗುತ್ತಿದೆ. 75 ಲಕ್ಷ ಮಹಿಳೆಯರು ಈಗಾಗಲೇ ಈ ಉಪಕ್ರಮಕ್ಕೆ ಸೇರಿದ್ದಾರೆ . ಈ 75 ಲಕ್ಷ ಮಹಿಳೆಯರಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಏಕಕಾಲದಲ್ಲಿ 10,000 ರೂ. ವರ್ಗಾಯಿಸಲಾಗಿದೆ ಎಂದು ಘೋಷಿಸಿದರು.
ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯು ಕೇಂದ್ರ ಸರ್ಕಾರದ ಲಖ್ಪತಿ ದೀದಿ ಅಭಿಯಾನವನ್ನು ಮತ್ತಷ್ಟು ಬಲಪಡಿಸಿದೆ, ಕೇಂದ್ರ ಸರ್ಕಾರವು ದೇಶಾದ್ಯಂತ 3 ಕೋಟಿ ಲಕ್ಷಪತಿ ದೀದಿಗಳನ್ನು ರೂಪಿಸುವ ಗುರಿ ಹೊಂದಿದೆ, 2 ಕೋಟಿಗೂ ಹೆಚ್ಚು ಮಹಿಳೆಯರು ಈಗಾಗಲೇ ಈ ಮೈಲಿಗಲ್ಲು ಸಾಧಿಸಿದ್ದಾರೆ. ಅವರ ಕಠಿಣ ಪರಿಶ್ರಮವು ಹಳ್ಳಿಗಳನ್ನು ಪರಿವರ್ತಿಸಿದೆ ಮತ್ತು ಸಮಾಜವನ್ನು ಪುನರೂಪಿಸಿದೆ. ಬಿಹಾರದಲ್ಲೂ ಲಕ್ಷಾಂತರ ಮಹಿಳೆಯರು ಲಖ್ಪತಿ ದೀದಿಗಳಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಉಪಕ್ರಮವನ್ನು ಮುನ್ನಡೆಸುತ್ತಿರುವ ರೀತಿ ನೋಡಿದರೆ, ಬಿಹಾರವು ದೇಶದಲ್ಲಿ ಅತಿ ಹೆಚ್ಚು ಲಕ್ಷಪತಿ ದೀದಿಗಳನ್ನು ಹೊಂದುವ ದಿನ ದೂರವಿಲ್ಲ ಎಂದು ಹೇಳಿದರು.
ಹಬ್ಬದ ಋತು ಆರಂಭವಾಗಿದೆ. ನವರಾತ್ರಿ ನಡೆಯುತ್ತಿದೆ, ದೀಪಾವಳಿ ಸಮೀಪಿಸುತ್ತಿದೆ ಮತ್ತು ಛಠ್ ಪೂಜೆ ಸಮೀಪಿಸುತ್ತಿದೆ. ಈ ಸಮಯದಲ್ಲಿ ಮಹಿಳೆಯರು ಮನೆಯ ವೆಚ್ಚವನ್ನು ಹೇಗೆ ನಿರ್ವಹಿಸುವುದು ಮತ್ತು ಉಳಿಸುವುದು ಎಂಬುದರ ಕುರಿತು ನಿರಂತರವಾಗಿ ಯೋಚಿಸುತ್ತಾರೆ. ಈ ಕಳವಳ ಕಡಿಮೆ ಮಾಡಲು, ನಮ್ಮ ಸರ್ಕಾರವು ಸೆಪ್ಟೆಂಬರ್ 22 2025 ರಿಂದ ದೇಶಾದ್ಯಂತ ಜಿಎಸ್ಟಿ ದರಗಳನ್ನು ಕಡಿಮೆ ಮಾಡುವ ಮೂಲಕ ಪ್ರಮುಖ ಹೆಜ್ಜೆ ಇಟ್ಟಿದೆ. ಇದರ ಪರಿಣಾಮವಾಗಿ, ಟೂತ್ಪೇಸ್ಟ್, ಸೋಪ್, ಶಾಂಪೂ, ತುಪ್ಪ ಮತ್ತು ಆಹಾರ ಪದಾರ್ಥಗಳಂತಹ ದೈನಂದಿನ ಅಗತ್ಯ ವಸ್ತುಗಳು ಈಗ ಕಡಿಮೆ ಬೆಲೆಗೆ ಸಿಗುತ್ತಿವೆ. ಮಕ್ಕಳ ಶಿಕ್ಷಣಕ್ಕಾಗಿ ಲೇಖನ ಸಾಮಗ್ರಿಗಳು, ಹಾಗೆಯೇ ಹಬ್ಬದ ಸಂದರ್ಭಗಳಲ್ಲಿ ಬಟ್ಟೆ ಮತ್ತು ಪಾದರಕ್ಷೆಗಳ ಬೆಲೆಯೂ ಕಡಿಮೆಯಾಗಿದೆ. ಈ ಕ್ರಮವು ಮನೆ ಮತ್ತು ಅಡುಗೆಮನೆ ಬಜೆಟ್ಗಳನ್ನು ನಿರ್ವಹಿಸುವ ಮಹಿಳೆಯರಿಗೆ ಗಮನಾರ್ಹ ಪರಿಹಾರ ನೀಡುತ್ತದೆ. ಹಬ್ಬಗಳ ಸಮಯದಲ್ಲಿ ಮಹಿಳೆಯರ ಮೇಲಿನ ಹೊರೆ ಕಡಿಮೆ ಮಾಡುವುದು ಮತ್ತು ಅವರ ಮುಖದಲ್ಲಿ ಸಂತೋಷ ತರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸುವ ಜವಾಬ್ದಾರಿಯಾಗಿದೆ ಎಂದು ಅವರು ದೃಢಪಡಿಸಿದರು.
ಬಿಹಾರದಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ನೀಡಿದಾಗಲೆಲ್ಲಾ, ಅವರು ತಮ್ಮ ಧೈರ್ಯ ಮತ್ತು ದೃಢಸಂಕಲ್ಪದ ಮೂಲಕ ಪರಿವರ್ತನಾತ್ಮಕ ಬದಲಾವಣೆ ತಂದಿದ್ದಾರೆ. ಮಹಿಳೆಯರ ಪ್ರಗತಿಯು ಇಡೀ ಸಮಾಜದ ಪ್ರಗತಿಗೆ ಕಾರಣವಾಗುತ್ತದೆ. ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ ಪ್ರಾರಂಭಿಸಿದ್ದಕ್ಕಾಗಿ ಬಿಹಾರದ ಜನರಿಗೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಪ್ರಧಾನಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವ ಶ್ರೀ ರಾಜೀವ್ ರಂಜನ್ ಸಿಂಗ್ ಮತ್ತು ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
