ಬಿಹಾರದ ಗಯಾದಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12,000 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು.

ಜ್ಞಾನ ಮತ್ತು ಮೋಕ್ಷದ ಪವಿತ್ರ ನಗರವಾದ ಗಯಾಕ್ಕೆ ಪ್ರಧಾನಿಯವರು ನಮನ ಸಲ್ಲಿಸಿದರು ಮತ್ತು ವಿಷ್ಣುಪಾದ ಮಂದಿರದ ಅದ್ಭುತ ಭೂಮಿಯಿಂದ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಗಯಾ ಆಧ್ಯಾತ್ಮಿಕತೆ ಮತ್ತು ಶಾಂತಿಯ ಭೂಮಿ ಎಂದು ಶ್ರೀ ಮೋದಿ ಹೇಳಿದರು. ಭಗವಾನ್ ಬುದ್ಧ ಜ್ಞಾನೋದಯವನ್ನು ಪಡೆದದ್ದು ಈ ಪುಣ್ಯಭೂಮಿಯಲ್ಲಿ ಎಂದು ಅವರು ಹೇಳಿದರು. “ಗಯಾ ಪ್ರಾಚೀನ ಮತ್ತು ಅತ್ಯಂತ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ” ಎಂದು ಶ್ರೀ ಮೋದಿ ಹೇಳಿದರು. ಇದನ್ನೂ ಓದಿ :  ವ್ಹೀಲಿಂಗ್ ನಿಯಂತ್ರಣಕ್ಕೆ ವಿಶೇಷ ತಂಡ

ಈ ಪ್ರದೇಶದ ಜನರು ನಗರವನ್ನು “ಗಯಾ” ಎಂದು ಮಾತ್ರ ಕರೆಯಬಾರದು, ಬದಲಿಗೆ ಗೌರವಯುತವಾಗಿ “ಗಯಾಜಿ” ಎಂದು ಕರೆಯಬೇಕೆಂದು ಬಯಸುತ್ತಾರೆ ಎಂದು ಹೇಳಿದ ಪ್ರಧಾನಿ, ಈ ಭಾವನೆಯನ್ನು ಗೌರವಿಸಿದ್ದಕ್ಕಾಗಿ ಬಿಹಾರ ಸರ್ಕಾರವನ್ನು ಅಭಿನಂದಿಸಿದರು. ಗಯಾದ ತ್ವರಿತ ಅಭಿವೃದ್ಧಿಗಾಗಿ ಕೇಂದ್ರ ಮತ್ತು ಬಿಹಾರದಲ್ಲಿರುವ ತಮ್ಮ ಸರ್ಕಾರಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.

ಇಂದು ಪವಿತ್ರ ಗಯಾಜಿ ಭೂಮಿಯಿಂದ ಒಂದೇ ದಿನದಲ್ಲಿ ₹12,000 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಯೋಜನೆಗಳು ಇಂಧನ, ಆರೋಗ್ಯ ಮತ್ತು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ ಎಂದು ಹೇಳಿದರು. ಈ ಉಪಕ್ರಮಗಳು ಬಿಹಾರದ ಕೈಗಾರಿಕಾ ಸಾಮರ್ಥ್ಯವನ್ನು ಬಲಪಡಿಸುತ್ತವೆ ಮತ್ತು ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು ಮತ್ತು ಈ ಪರಿವರ್ತನಾತ್ಮಕ ಯೋಜನೆಗಳಿಗಾಗಿ ಬಿಹಾರದ ಜನರನ್ನು ಅಭಿನಂದಿಸಿದರು. ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಇಂದು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಇದರೊಂದಿಗೆ ಬಿಹಾರದ ಜನರು ಈಗ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚುವರಿ ಸೌಲಭ್ಯವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್, ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್, ಶ್ರೀ ಜಿತನ್ ರಾಮ್ ಮಾಂಜಿ, ಶ್ರೀ ಗಿರಿರಾಜ್ ಸಿಂಗ್, ಶ್ರೀ ಚಿರಾಗ್ ಪಾಸ್ವಾನ್, ಶ್ರೀ ನಿತ್ಯಾನಂದ ರೈ, ಶ್ರೀ ರಾಮ್ ನಾಥ್ ಠಾಕೂರ್, ಡಾ. ರಾಜ್ ಭೂಷಣ್ ಚೌಧರಿ, ಶ್ರೀ ಸತೀಶ್ ಚಂದ್ರ ದುಬೆ ಮತ್ತಿತರರು ಉಪಸ್ಥಿತರಿದ್ದರು.