ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 230 ಕ್ಕೂ ಹೆಚ್ಚು ಜಿಲ್ಲೆಗಳ 50,000 ಕ್ಕೂ ಹೆಚ್ಚು ಹಳ್ಳಿಗಳ ಆಸ್ತಿ ಮಾಲೀಕರಿಗೆ ಸ್ವಾಮಿತ್ವ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಆಸ್ತಿ ಕಾರ್ಡ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಭಾರತದ ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಚರಿತ್ರಾರ್ಹ ದಿನವಾಗಿದೆ ಎಂದರಲ್ಲದೆ ಈ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳು ಮತ್ತು ನಾಗರಿಕರಿಗೆ ಶುಭ ಕೋರಿದರು.
ಐದು ವರ್ಷಗಳ ಹಿಂದೆ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಆಸ್ತಿ ಕಾರ್ಡ್ ಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ಪ್ರಧಾನಿ ಹೇಳಿದರು. ವಿವಿಧ ರಾಜ್ಯಗಳು ಆಸ್ತಿ ಮಾಲೀಕತ್ವ ಪ್ರಮಾಣಪತ್ರಗಳನ್ನು ಘರೋನಿ, ಅಧಿಕಾರ್ ಅಭಿಲೇಖ್, ಪ್ರಾಪರ್ಟಿ ಕಾರ್ಡ್,ಮಾಲ್ಮಟ್ಟಾ ಪತ್ರಕ್ ಮತ್ತು ಆವಾಸಿಯಾ ಭೂಮಿ ಪಟ್ಟಾ ಮುಂತಾದ ವಿವಿಧ ಹೆಸರುಗಳಿಂದ ಉಲ್ಲೇಖಿಸುತ್ತವೆ ಎಂದು ಅವರು ಹೇಳಿದರು. “ಕಳೆದ 5 ವರ್ಷಗಳಲ್ಲಿ 1.5 ಕೋಟಿಗೂ ಹೆಚ್ಚು ಜನರಿಗೆ ಸ್ವಾಮಿತ್ವ ಕಾರ್ಡ್ ಗಳನ್ನು ವಿತರಿಸಲಾಗಿದೆ” ಎಂದು ಶ್ರೀ ಮೋದಿ ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ, 65 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಕಾರ್ಡ್ ಗಳನ್ನು ಪಡೆದಿವೆ ಎಂದು ಅವರು ನುಡಿದರು. ಸ್ವಾಮಿತ್ವ ಯೋಜನೆ ಅಡಿಯಲ್ಲಿ ಹಳ್ಳಿಗಳಲ್ಲಿ ಸುಮಾರು 2.25 ಕೋಟಿ ಜನರು ಈಗ ತಮ್ಮ ಮನೆಗಳಿಗೆ ಕಾನೂನುಬದ್ಧ ದಾಖಲೆಗಳನ್ನು ಪಡೆದಿದ್ದಾರೆ ಎಂದು ಪ್ರಧಾನಿ ಹೇಳಿದರು. ಎಲ್ಲಾ ಫಲಾನುಭವಿಗಳಿಗೆ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ತಿಳಿಸಿದರು.
ಸ್ವಾಮಿತ್ವ ಯೋಜನೆ ಮೂಲಕ ಆಸ್ತಿ ದಾಖಲೀಕರಣದ ಸವಾಲನ್ನು ಎದುರಿಸಲು ಸರ್ಕಾರ 2014 ರಲ್ಲಿ ನಿರ್ಧರಿಸಿತು ಎಂದು ಅವರು ಹೇಳಿದರು. ಯಾವುದೇ ಸಂವೇದನಾಶೀಲ ಸರ್ಕಾರವು ತನ್ನ ಗ್ರಾಮಸ್ಥರನ್ನು ಇಂತಹ ಸಂಕಷ್ಟಕ್ಕೆ ದೂಡಬಾರದಿತ್ತು ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ವಾಮಿತ್ವ ಯೋಜನೆಯ ಬಗ್ಗೆ ವಿವರಿಸಿದ ಅವರು, ಇದು ಡ್ರೋನ್ಗಳನ್ನು ಬಳಸಿಕೊಂಡು ಹಳ್ಳಿಗಳಲ್ಲಿನ ಮನೆಗಳು ಮತ್ತು ಭೂಮಿಯನ್ನು ಮ್ಯಾಪಿಂಗ್ ಮಾಡುವುದು ಮತ್ತು ಗ್ರಾಮಸ್ಥರಿಗೆ ವಸತಿ ಆಸ್ತಿಗಳಿಗೆ ಕಾನೂನುಬದ್ಧ ದಾಖಲೆಗಳನ್ನು ಒದಗಿಸುವುದನ್ನು ಒಳಗೊಂಡಿದೆ ಎಂದರು. ಈ ಯೋಜನೆಯ ಪ್ರಯೋಜನಗಳು ಈಗ ಗೋಚರಿಸುತ್ತಿವೆ ಎಂದು ಅವರು ಹೇಳಿದರು. ಸ್ವಾಮಿತ್ವ ಯೋಜನೆಯ ಫಲಾನುಭವಿಗಳೊಂದಿಗಿನ ತಮ್ಮ ಹಿಂದಿನ ಸಂವಾದವನ್ನು ಉಲ್ಲೇಖಿಸಿದ ಶ್ರೀ ಮೋದಿ, ಈ ಯೋಜನೆಯು ಅವರ ಜೀವನವನ್ನು ಹೇಗೆ ಪರಿವರ್ತಿಸಿದೆ ಎಂಬುದನ್ನು ವಿವರಿಸಿದರು, ಅವರು ಈಗ ತಮ್ಮ ಆಸ್ತಿಗಳಿಗಾಗಿ ಬ್ಯಾಂಕುಗಳಿಂದ ಸಹಾಯವನ್ನು ಪಡೆಯುತ್ತಿದ್ದಾರೆ ಮತ್ತು ಅವರ ತೃಪ್ತಿ ಹಾಗು ಸಂತೋಷ ಸ್ಪಷ್ಟವಾಗಿದೆ ಎಂದರು. ಇದನ್ನು ದೊಡ್ಡ ಆಶೀರ್ವಾದವೆಂದು ಪರಿಗಣಿಸುವುದಾಗಿಯೂ ಪ್ರಧಾನ ಮಂತ್ರಿ ಹೇಳಿದರು.