ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ರಷ್ಯಾಕ್ಕೆ ತೆರಳಿದ್ದಾರೆ. ಮಾಸ್ಕೋದಲ್ಲಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಷ್ಯಾ ಭೇಟಿ

ಮೂರು ವರ್ಷಗಳ ನಂತರ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. ಉಕ್ರೇನ್ (Ukraine) ಯುದ್ಧ ಆರಂಭವಾದ ನಂತರ ಇವರಿಬ್ಬರ ಮೊದಲ ಭೇಟಿ ಇದಾಗಿದೆ. ಪ್ರಧಾನಿ ಮೋದಿಯವರ ಈ ಭೇಟಿಯ ಮೇಲೆ ಪಾಶ್ಚಿಮಾತ್ಯ ದೇಶಗಳ ಜೊತೆಗೆ ಚೀನಾ (China) ಕೂಡ ಕಣ್ಣಿಟ್ಟಿದೆ.

ಈ ಮಹತ್ವದ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ರಷ್ಯಾದ ಸೇನೆಯಲ್ಲಿ ಭಾರತೀಯರನ್ನು ಸೇರ್ಪಡೆಗೊಳಿಸುವ ಮತ್ತು S-400 ಕ್ಷಿಪಣಿ ವ್ಯವಸ್ಥೆಯ ಎರಡು ಘಟಕಗಳನ್ನು ವಿಳಂಬಗೊಳಿಸುವ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ಅಸ್ತಾನಾದಲ್ಲಿ ನಡೆದ ಶಾಂಘೈ ಸಹಕಾರ ಸಮ್ಮೇಳನದಲ್ಲಿಯೂ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕೆಲವು ಮಹತ್ವದ ವಿಷಯವನ್ನು ಸ್ಪಷ್ಟವಾಗಿ ಮತ್ತು ಬಲವಾಗಿ ಪ್ರಸ್ತಾಪಿಸಿದ್ದರು. ಇದೀಗ ಪ್ರಧಾನಿ ಮೋದಿ ಅವರೇ ಈ ವಿಷಯವನ್ನು ಪುಟಿನ್ ಅವರ ಬಳಿ ಉನ್ನತ ಮಟ್ಟದಲ್ಲಿ ಪ್ರಸ್ತಾಪಿಸಬಹುದು ಎಂದು ಹೇಳಲಾಗುತ್ತಿದೆ.

ಉದ್ಯೋಗದ ಆಮಿಷ ಒಡ್ಡಿ ಸುಮಾರು 20 ಭಾರತೀಯರನ್ನು ರಷ್ಯಾ ಸೇನೆಗೆ ಸೇರಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಉಕ್ರೇನ್‌ನಲ್ಲಿ ನಡೆದ ಹೋರಾಟದಲ್ಲಿ ಇಬ್ಬರು ಭಾರತೀಯರೂ ಸಾವನ್ನಪ್ಪಿದ್ದಾರೆ. ಅನೇಕ ಭಾರತೀಯ ನಾಗರಿಕರು ರಷ್ಯಾದ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಏಪ್ರಿಲ್‌ನಲ್ಲಿ ದೃಢಪಡಿಸಿತ್ತು. ಈ ಪೈಕಿ 10 ಮಂದಿ ಭಾರತಕ್ಕೆ ಮರಳಿದ್ದಾರೆ.