ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದರು. ಇದನ್ನೂ ಓದಿ :ಬೆಂಗಳೂರು ಕಾಲ್ತುಳಿತ ಪ್ರಕರಣ – ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ
ಜೊತೆಗೆ ಅಂಜಿ ನದಿಯ ಮೇಲೆ ನಿರ್ಮಿಸಲಾದ ಭಾರತದ ಮೊಟ್ಟ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆಯನ್ನೂ ಉದ್ಘಾಟಿಸಿದರು. ಈ ವೇಳೆ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಹಾಗೂ ರಾಜ್ಯಪಾಲ ಮನೋಜ್ ಸಿನ್ಹಾ ಉಪಸ್ಥಿತರಿದ್ದರು. ಚೆನಾಬ್ ಸೇತುವೆಯನ್ನು ಉದ್ಘಾಟಿಸಿದ ಬಳಿಕ ರಾಷ್ಟ್ರಧ್ವಜ ಹಿಡಿದು ಒಂದು ಸುತ್ತು ಪ್ರದಕ್ಷಿಣೆ ಹಾಕಿದರು.
ಚೆನಾಬ್ ಸೇತುವೆ ಬಳಿಕ ಜಮ್ಮು ಮತ್ತು ಕಾಶ್ಮೀರದ ಕತ್ರಾ-ಶ್ರೀನಗರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ಹಾಗೂ ವಿದ್ಯಾರ್ಥಿಗಳೊಂದಿಗೆ ಕೆಲ ಕಾಲ ಸಂವಾದ ಸಹ ನಡೆಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ಚಾಲನೆ ನೀಡುವ ಹಿನ್ನೆಲೆ ಜಮ್ಮು ಕಾಶ್ಮೀರಕ್ಕಿಂದು ಪ್ರಧಾನಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಮಾತಾ ವೈಷ್ಣೋದೇವಿ ದೇವಾಲಯದ ನೆಲೆಯಾದ ಕತ್ರಾದಲ್ಲಿ 46,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಮೋದಿ ಚಾಲನೆ ನೀಡಲಿದ್ದಾರೆ. ಕತ್ರಾದಲ್ಲಿ 350 ಕೋಟಿ ರೂ.ಗಿಂತಲೂ ಹೆಚ್ಚು ವೆಚ್ಚದ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಸಂಸ್ಥೆಯ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಚೆನಾಬ್ ಸೇತುವೆ ಐಫೆಲ್ ಟವರ್‌ಗಿಂತಲೂ ಎತ್ತರವಾಗಿ ನಿರ್ಮಾಣವಾಗಿರುವ, ವಿಶ್ವದಲ್ಲೇ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. 2021ರಲ್ಲಿ ಸೇತುವೆಯ ಕಮಾನು ಕೆಲಸ ಪೂರ್ಣಗೊಂಡಿತ್ತು.
ಈ ಸೇತುವೆಯನ್ನು ಅಂದಾಜು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ 35 ಮೀ. ಎತ್ತರದಲ್ಲಿ ನಿರ್ಮಾಣವಾಗಿದೆ. ಚೆನಾಬ್ ಸೇತುವೆ ಚೆನಾಬ್ ನದಿ ಮಟ್ಟದಿಂದ 359 ಮೀ. ಎತ್ತರದಲ್ಲಿ ನಿರ್ಮಾಣವಾಗಿದ್ದು, 1.3 ಕಿ.ಮೀ. ಉದ್ದವಿದೆ. ಇದರ ಉಕ್ಕಿನ ಕಮಾನುಗಳು ಭೂಕಂಪನ, ಬಲವಾದ ಗಾಳಿಯನ್ನೂ ತಡೆಯುವ ಸಾಮರ್ಥ್ಯ ಹೊಂದಿದೆ, ಆ ರೀತಿ ಕಮಾನುಗಳನ್ನು ವಿನ್ಯಾಸಗೊಳಿಸಲಾಗಿದೆ.
ರೈಲ್ವೇ ಸೇತುವೆ ನಿರ್ಮಾಣಕ್ಕೆ ಕಮಾನು ಸ್ಥಾಪನೆ ಎಂಜಿನಿಯರುಗಳಿಗೆ ದೊಡ್ಡ ಸವಾಲಾಗಿತ್ತು. ರೈಲ್ವೇ ಮಾರ್ಗದ 111 ಕಿ.ಮೀ ನಲ್ಲಿ 97 ಕಿ.ಮೀ ನಷ್ಟು ಸುರಂಗ ಮಾರ್ಗವೇ ಇದೆ. ಇಷ್ಟು ದೂರದ ಸುರಂಗ ಮಾರ್ಗ ದೇಶದ ಬೇರೆ ಯಾವ ಭಾಗಗಳಲ್ಲೂ ಮಾಡಲಾಗಿಲ್ಲ.
ಸೇತುವೆ ನಿರ್ಮಾಣಕ್ಕೆ 17 ಕಂಬಗಳನ್ನು ನಿರ್ಮಿಸಲಾಗಿದ್ದು, ಒಟ್ಟು 28,660 ಮೆಟ್ರಿಕ್ ಟನ್‌ನಷ್ಟು ಉಕ್ಕನ್ನು ಬಳಸಲಾಗಿದೆ. ಕಮಾನಿನ ತೂಕ 10,619 ಮೆಟ್ರಿಕ್ ಟನ್ ಇದೆ. ಸೇತುವೆಗೆ ಬಳಸಲಾದ ಉಕ್ಕು 10 ಡಿಗ್ರಿ ಸೆಲ್ಸಿಯಸ್‌ನಿಂದ ಮೈನಸ್ 40 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನಕ್ಕೆ ಸೂಕ್ತವಾಗಿದೆ. ಕನಿಷ್ಠ 120 ವರ್ಷಗಳ ಜೀವಿತಾವಧಿ ಈ ರಚನೆಗಿದ್ದು, ಗಂಟೆಗೆ 266 ಕಿ.ಮೀ ವೇಗದ ಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಕಾಶ್ಮೀರಕ್ಕೆ ರೈಲು ಮಾರ್ಗವನ್ನು ಹಾಕುವ ಯೋಜನೆಯನ್ನು 1990ರ ದಶಕದಲ್ಲಿ ಆಗಿನ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ಪ್ರಕಟಿಸಿದ್ದರು. 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕರೆದಿದ್ದರು.