ಘನತೆವೆತ್ತ ಅಧ್ಯಕ್ಷ ಟ್ರಂಪ್ ಅವರೇ,
ಎರಡೂ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮ ಮಿತ್ರರೇ,

ನಮಸ್ಕಾರ! ಮೊದಲಿಗೆ, ನನ್ನ ಆತ್ಮೀಯ ಸ್ನೇಹಿತ, ಅಧ್ಯಕ್ಷ ಟ್ರಂಪ್ ಅವರು ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ತಮ್ಮ ನಾಯಕತ್ವದ ಮೂಲಕ, ಅಧ್ಯಕ್ಷ ಟ್ರಂಪ್ ಅವರು ಭಾರತ-ಯುಎಸ್ ಸಂಬಂಧವನ್ನು ಪೋಷಿಸಿದ್ದಾರೆ ಮತ್ತು ಪುನರುಜ್ಜೀವನಗೊಳಿಸಿದ್ದಾರೆ.

ಅವರ ಮೊದಲ ಅವಧಿಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡುವಾಗ ಎಂತಹ ಉತ್ಸಾಹ ಇತ್ತೋ; ಅದೇ ಉತ್ಸಾಹ, ಅದೇ ಶಕ್ತಿ ಮತ್ತು ಅದೇ ಬದ್ಧತೆ ಇಂದು ನನಗೆ ಕಾಣಿಸಿತು. ಇಂದು ನಡೆದ ಚರ್ಚೆಗಳು ಅವರ ಮೊದಲ ಅವಧಿಯಲ್ಲಿ ನಾವು ಸಾಧಿಸಿದ್ದನ್ನು ಮೆಚ್ಚುವ ಮತ್ತು ನಮ್ಮ ನಡುವಿನ ಗಾಢವಾದ ವಿಶ್ವಾಸವನ್ನು ತೋರಿಸುವ ಸೇತುವಿನಂತಿದ್ದವು. ಹೊಸ ಗುರಿಗಳನ್ನು ತಲುಪುವ ದೃಢ ಸಂಕಲ್ಪವೂ ಅಲ್ಲಿತ್ತು. ಭಾರತ ಮತ್ತು ಅಮೆರಿಕದ ಸಹಯೋಗ ಮತ್ತು ಸಹಕಾರವು ಉತ್ತಮ ಜಗತ್ತನ್ನು ರೂಪಿಸಬಲ್ಲದು ಎಂದು ನಾವು ನಂಬುತ್ತೇವೆ.

ಅಮೆರಿಕಾದಲ್ಲಿ ಅಧ್ಯಕ್ಷ ಟ್ರಂಪ್ ಅವರ “ಮೇಕ್ ಅಮೆರಿಕಾ ಗ್ರೇಟ್ ಅಗೈನ್” ಅಂದರೆ “MAGA” ಎಂಬ ಘೋಷಣೆ ಜನಪ್ರಿಯವಾಗಿದೆ. ಅದೇ ರೀತಿ, ಭಾರತದ ಜನರು ಕೂಡಾ ಪರಂಪರೆಯ ಜೊತೆಗೆ ಅಭಿವೃದ್ಧಿಯ ಪಥದಲ್ಲಿ “ವಿಕ್ಸಿತ ಭಾರತ 2047” ಎಂಬ ಸಂಕಲ್ಪದೊಂದಿಗೆ ವೇಗವಾಗಿ ಮುನ್ನಡೆಯುತ್ತಿದ್ದಾರೆ. ಅಮೆರಿಕದ ಭಾಷೆಯಲ್ಲಿ ಹೇಳುವುದಾದರೆ, ಅಭಿವೃದ್ಧಿ ಹೊಂದಿದ ಭಾರತ ಎಂದರೆ ಮೇಕ್ ಇಂಡಿಯಾ ಗ್ರೇಟ್ ಅಗೇನ್, ಅಂದರೆ “MIGA”. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಭಾರತ ಒಟ್ಟಿಗೆ ಕೆಲಸ ಮಾಡಿದಾಗ, ಅಂದರೆ “MAGA” ಜೊತೆಗೆ “MIGA”, ಸಮೃದ್ಧಿಗಾಗಿ “MEGA” ಪಾಲುದಾರಿಕೆ ರೂಪುಗೊಳ್ಳುತ್ತದೆ. ಮತ್ತು ಈ ಮೆಗಾ ಸ್ಫೂರ್ತಿ ನಮ್ಮ ಗುರಿಗಳಿಗೆ ಹೊಸ ವ್ಯಾಪ್ತಿ ಮತ್ತು ವಿಸ್ತಾರವನ್ನು ನೀಡುತ್ತದೆ.

ಇಂದು ನಾವು 2030ರ ವೇಳೆಗೆ ದ್ವಿಪಕ್ಷೀಯ ವಾಣಿಜ್ಯವನ್ನು 500 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸುವ ಮಹತ್ವದ ಗುರಿಯನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ, ಉಭಯ ದೇಶಗಳಿಗೂ ಲಾಭದಾಯಕವಾದ ವ್ಯಾಪಾರ ಒಪ್ಪಂದವನ್ನು ಶೀಘ್ರವಾಗಿ ಮಾಡಿಕೊಳ್ಳಲು ನಮ್ಮ ತಂಡಗಳು ಶ್ರಮಿಸಲಿವೆ.ಮಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ತೈಲ ಮತ್ತು ಅನಿಲ ವಹಿವಾಟನ್ನು ಬಲಪಡಿಸುತ್ತೇವೆ. ಇಂಧನ ಮೂಲಸೌಕರ್ಯದಲ್ಲಿ ಹೂಡಿಕೆಯೂ ಹೆಚ್ಚಾಗುತ್ತದೆ. ಅಣುಶಕ್ತಿ ಕ್ಷೇತ್ರದಲ್ಲಿ, ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ (Small Modular Reactors) ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ನಾವು ಮಾತನಾಡಿದ್ದೇವೆ.

ಸ್ನೇಹಿತರೇ,

ಭಾರತದ ರಕ್ಷಣಾ ಸಿದ್ಧತೆಯಲ್ಲಿ ಅಮೆರಿಕ ಮಹತ್ವದ ಪಾತ್ರವನ್ನು ಹೊಂದಿದೆ. ಕಾರ್ಯತಂತ್ರದ ಮತ್ತು ವಿಶ್ವಾಸಾರ್ಹ ಪಾಲುದಾರರಾಗಿ, ನಾವು ಜಂಟಿ ಅಭಿವೃದ್ಧಿ, ಜಂಟಿ ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆಯ ದಿಕ್ಕಿನಲ್ಲಿ ಸಕ್ರಿಯವಾಗಿ ಮುನ್ನಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳು ನಮ್ಮ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲಿವೆ. ಸ್ವಾಯತ್ತ ವ್ಯವಸ್ಥೆಗಳ ಕೈಗಾರಿಕಾ ಒಕ್ಕೂಟ (Autonomous Systems Industry Alliance) ವನ್ನು ಸ್ಥಾಪಿಸುವ ಮೂಲಕ ನಾವು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿದ್ದೇವೆ. ಮುಂದಿನ ದಶಕದ ರಕ್ಷಣಾ ಸಹಕಾರಕ್ಕಾಗಿ ಒಂದು ಸಮಗ್ರ ಚೌಕಟ್ಟನ್ನು ರೂಪಿಸಲಾಗುವುದು. ರಕ್ಷಣಾ ಪಡೆಗಳ ನಡುವಿನ ಸಹಕಾರ, ಲಾಜಿಸ್ಟಿಕ್ಸ್, ದುರಸ್ತಿ ಮತ್ತು ನಿರ್ವಹಣೆಯಂತಹ ಕಾರ್ಯತಂತ್ರದ ಅಂಶಗಳಿಗೆ ಇದರಲ್ಲಿ ಪ್ರಮುಖ ಆದ್ಯತೆ ನೀಡಲಾಗುವುದು.

ಇಪ್ಪತ್ತೊಂದನೇ ಶತಮಾನವು ತಂತ್ರಜ್ಞಾನ ಚಾಲಿತ ಶತಮಾನವಾಗಿದೆ. ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ನಂಬಿಕೆಯುಳ್ಳ ದೇಶಗಳ ನಡುವಿನ ತಂತ್ರಜ್ಞಾನ ವಲಯದಲ್ಲಿನ ನಿಕಟ ಸಹಕಾರವು ಇಡೀ ಮಾನವಕುಲಕ್ಕೆ ಹೊಸ ದಿಕ್ಕು, ಶಕ್ತಿ ಮತ್ತು ಅವಕಾಶಗಳನ್ನು ನೀಡಬಲ್ಲದು. ಭಾರತ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ ಗಳು, ಕ್ವಾಂಟಮ್, ಜೈವಿಕ ತಂತ್ರಜ್ಞಾನ ಮತ್ತು ಇತರ ತಂತ್ರಜ್ಞಾನಗಳಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಲಿವೆ.

ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ನಮ್ಮ ಸಂಬಂಧದಲ್ಲಿ ಒಂದು ಪ್ರಮುಖ ಕೊಂಡಿಯಾಗಿದೆ. ನಮ್ಮ ಜನರ ನಡುವಿನ ಬಾಂಧವ್ಯವನ್ನು ಗಾಢವಾಗಿಸಲು, ನಾವು ಶೀಘ್ರದಲ್ಲೇ ಲಾಸ್ ಏಂಜಲೀಸ್ ಮತ್ತು ಬೋಸ್ಟನ್‌ ನಲ್ಲಿ ಹೊಸ ಭಾರತೀಯ ಕಾನ್ಸುಲೇಟ್‌ ಗಳನ್ನು ತೆರೆಯುತ್ತೇವೆ. ಅಮೆರಿಕದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಭಾರತದಲ್ಲಿ ಆಫ್-ಶೋರ್ ಕ್ಯಾಂಪಸ್‌ ಗಳನ್ನು ತೆರೆಯಲು ಆಹ್ವಾನಿಸಿದ್ದೇವೆ.

ಭಾರತದ ಬಗ್ಗೆ ನಿಮಗಿರುವ ಸ್ನೇಹ ಮತ್ತು ಸ್ಥಿರ ಬದ್ಧತೆಗಾಗಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಭಾರತದ ಜನರು ನಿಮ್ಮ 2020 ರ ಭೇಟಿಯನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ ಮತ್ತು ಅಧ್ಯಕ್ಷ ಟ್ರಂಪ್ ಅವರು ಮತ್ತೊಮ್ಮೆ ತಮ್ಮ ಬಳಿಗೆ ಬರುತ್ತಾರೆ ಎಂದು ಆಶಿಸುತ್ತಾರೆ. 1.4 ಬಿಲಿಯನ್ ಭಾರತೀಯರ ಪರವಾಗಿ, ನಾನು ನಿಮ್ಮನ್ನು ಭಾರತಕ್ಕೆ ಬರಲು ಆಹ್ವಾನಿಸುತ್ತೇನೆ.

ಹಕ್ಕುತ್ಯಾಗ – ಇದು ಪ್ರಧಾನಮಂತ್ರಿಯವರ ಭಾಷಣದ ಭಾವಾನುವಾದ. ಮೂಲ ಭಾಷಣವನ್ನು ಹಿಂದಿ ಭಾಷೆಯಲ್ಲಿ ಮಾಡಲಾಗಿತ್ತು.