ನವದೆಹಲಿ: 2012 ರಲ್ಲಿ ಮಹಾರಾಷ್ಟ್ರದಲ್ಲಿ (Maharashtra) ಎರಡು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಂದು ಗಲ್ಲು ಶಿಕ್ಷೆಗೆ ಒಳಗಾಗಿದ್ದ ಅಪರಾಧಿಯ ದಯಾ ಅರ್ಜಿಯನ್ನು (Mercy Plea) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ತಿರಸ್ಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ರಾಷ್ಟ್ರಪತಿಗಳು ತಿರಸ್ಕರಿಸಿದ ಮೂರನೇ ದಯಾ ಅರ್ಜಿ ಇದಾಗಿದೆ. ಇದನ್ನೂ ಓದಿ : ಆಹಾರ ವಿಜ್ಞಾನ – ರಾಷ್ಟ್ರೀಯ ಮಟ್ಟದ ಸಮ್ಮೇಳನದ ಉದ್ಘಾಟನಾ ಸಮಾರಂಭ
ಅಕ್ಟೋಬರ್ 3, 2019 ರಂದು ಸುಪ್ರೀಂ ಕೋರ್ಟ್ (Supreme Court) ಅಪರಾಧಿ ರವಿ ಅಶೋಕ್ ಘುಮಾರೆಗೆ ಮರಣದಂಡನೆಯನ್ನು ಎತ್ತಿ ಹಿಡಿದಿತ್ತು. ಅಪರಾಧಿ ʻದೈಹಿಕ ಬಯಕೆಗಳʼ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ. ಆತ ಲೈಂಗಿಕ ಬಯಕೆ ತಣಿಸಲು ಎಲ್ಲಾ ನೈಸರ್ಗಿಕ, ಸಾಮಾಜಿಕ ಮತ್ತು ಕಾನೂನು ಮಿತಿಗಳನ್ನು ಮೀರಿದ್ದಾನೆ ಎಂದು ಕೋರ್ಟ್ ಈ ವೇಳೆ ಅಭಿಪ್ರಾಯಪಟ್ಟಿತ್ತು.
ನ್ಯಾಯಮೂರ್ತಿ ಸೂರ್ಯ ಕಾಂತ್ (ಈಗ ಭಾರತದ ಮುಖ್ಯ ನ್ಯಾಯಮೂರ್ತಿ) ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು 2:1ರ ಬಹುಮತದ ತೀರ್ಪು ನೀಡಿತ್ತು. ಅಪರಾಧಿ ಇನ್ನೂ ಅರಳದ ಜೀವವನ್ನು ನಿರ್ದಯವಾಗಿ ಕೊನೆಗೊಳಿಸಿದ್ದಾನೆ. ಎರಡು ವರ್ಷದ ಮಗುವಿನೊಂದಿಗೆ ಅಸ್ವಾಭಾವಿಕ ಅಪರಾಧ ಮಾಡಿದ ಅವನ ಕೃತ್ಯವು ವಿಕೃತ ಮನಸ್ಸನ್ನು ಪ್ರದರ್ಶಿಸುತ್ತದೆ. ಇದು ಕ್ರೌರ್ಯದ ಭಯಾನಕತೆಯನ್ನು ಬಿಚ್ಚಿಡುತ್ತದೆ ಎಂದು ಪೀಠ ಈ ವೇಳೆ ಹೇಳಿತ್ತು.
ಮೇಲ್ಮನವಿ ಸಲ್ಲಿಸಿದ ಅಪರಾಧಿ 2 ವರ್ಷದ ಮಗುವನ್ನು ಅಪಹರಿಸಿ, ಆಕೆ ಕೊನೆಯುಸಿರೆಳೆಯುವವರೆಗೂ ನಾಲ್ಕರಿಂದ ಐದು ಗಂಟೆಗಳ ಕಾಲ ಆಕೆಗೆ ಹಿಂಸೆ ನೀಡುತ್ತಲೇ ಇದ್ದ. ಮಗುವಿಗೆ ಪ್ರೀತಿ, ವಾತ್ಸಲ್ಯ ಮತ್ತು ರಕ್ಷಣೆಯನ್ನು ತೋರಿಸುವ ಬದಲು, ಅವಳನ್ನು ತನ್ನ ಕಾಮಕ್ಕೆ ಬಲಿಪಶುವನ್ನಾಗಿ ಮಾಡಿದ್ದಾನೆ ಎಂಬುದನ್ನು ಪೀಠ ಗಮನಿಸಿ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.
