ಸುಮಾರು 232 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದೆ. ಮಧ್ಯಾಹ್ನ 1:50ರ ಸುಮಾರಿಗೆ ಅಹಮದಾಬಾದ್‌ನ ಮೇಘಾನಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ವಿಮಾನ ಪ್ರಯಾಣಿಕರನ್ನು ಹೊತ್ತು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುವ ವೇಳೆ ದುರ್ಘಟನೆ ನಡೆದಿದೆ. ಟೇಕಾಫ್ ಆದ 2 ಕಿ.ಮೀ ದೂರದಲ್ಲಿ ವಿಮಾನ ಪತನಗೊಂಡಿದೆ.
ಘಟನಾ ಸ್ಥಳಕ್ಕೆ 7 ಅಗ್ನಿ ಶಾಮಕ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ವಿಮಾನ ಜನವಸತಿ ಕಟ್ಟಡದ ಮೇಲೆ ಬಿದ್ದಿದೆ. ಹೀಗಾಗಿ ಸಾವು ನೋವಿನ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆಯಿದೆ.
ಪತನಗೊಂಡ ಏರ್ ಇಂಡಿಯಾ ವಿಮಾನದ ಪೈಲಟ್ 8,200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತಿಳಿಸಿದೆ.
ಅಹಮದಾಬಾದ್‌ನಲ್ಲಿ ಲಂಡನ್‌ಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ಸಮಸ್ಯೆಯಿಂದ ಪತನಗೊಂಡ ಬೆನ್ನಲ್ಲೇ ಡಿಜಿಸಿಎ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.39ಕ್ಕೆ ಟೇಕಾಫ್ ಆಗಿದೆ. ವಿಮಾನದಲ್ಲಿ 2 ಪೈಲಟ್‌ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 242 ಜನ ಪ್ರಯಾಣಿಸುತ್ತಿದ್ದರು.
ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ 8,200 ಗಂಟೆಗಳ ಅನುಭವ ಹೊಂದಿದ್ದರೆ ಸಹ-ಪೈಲಟ್ 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಕರೆ ಬಂದಿದೆ. ನಂತರ ಎಟಿಸಿ ಮಾಡಿದ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.