ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕರಿಯಂಗಳ ಗ್ರಾಮದ ಪೊಳಲಿ ಬಳಿ ಪುನಶ್ಚೇತನ ಗೊಂಡಿರುವ ಕಾಳಿ ಸರೋವರದ ಹಸ್ತಾಂತರ ಕಾರ್ಯಕ್ರಮ

ಬಂಟ್ವಾಳ: ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಕೆರೆ, ಸರೋವರಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಇದರಿಂದಾಗಿ ಸ್ಥಳೀಯ ಬೋರ್‌ವೆಲ್ ಹಾಗೂ ಬಾವಿಗಳಲ್ಲಿ ನೀರು ಮರುಪೂರಣಗೊಂಡಿದೆ. ಅನೇಕ ಕೆರೆಗಳು ಹೂಳು ತುಂಬಿ ಮುಚ್ಚಿಹೋಗಿ ಕ್ರಿಕೆಟ್ ಮೈದಾನದಂತಾಗಿದ್ದು, ರಾಜ್ಯದ್ಯಂತ ಅತಂಹ ಕೆರೆಗಳನ್ನು ಜನರ ಸಹಕಾರದೊಂದಿಗೆ ಪುನರುಜ್ಜೀವನಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ, ಕರಿಯಂಗಳ ಗ್ರಾಮ ಪಂಚಾಯತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಕರಿಯಂಗಳ ಇದರ ಸಹಯೋಗದೊಂದಿಗೆ ಕರಿಯಂಗಳ ಗ್ರಾಮದ ಪೊಳಲಿ ಬಳಿ ಪುನಶ್ಚೇತನ ಗೊಂಡಿರುವ ಕಾಳಿ ಸರೋವರದ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆರೆಗೆ ಬಾಗಿನ ಅರ್ಪಿಸಿ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.ಮುಂದಿನ ದಿನಗಳಲ್ಲಿ ಈ ಕೆರೆಯಲ್ಲೂ ಹೂಳು ತುಂಬಿಕೊಳ್ಳದಂತೆ ರಕ್ಷಿಸುವ ಜವಬ್ದಾರಿ ಗ್ರಾಮಸ್ಥರಿಗಿದ್ದು ಕೆರೆ ನೀರಿನಿಂದ ಸಮೃದ್ಧವಾಗಲಿ ಎಂದು ಹಾರೈಸಿದರು.

ಬಂಟ್ವಾಳ ಶಾಸಕ ರಾಜೇಶ್ ನಾಕ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ದೂರದೃಷ್ಟಿ ಯೋಜನೆಯಿಂದಾಗಿ ಕಾಳಿ ಕೆರೆ ಉತ್ತಮವಾಗಿ ಅಭಿವೃದ್ದಿಯಾಗಿದು ಅದನ್ನು ಉಳಿಸುವ ಕಾರ್ಯ ನಮ್ಮೆಲ್ಲರ ಮೇಲಿದೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಭೂಮಿಯಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆರೆಗಳ ಹೂಳೆತ್ತಿ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂದು ತಿಳಿಸಿದರು.

ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಮಾತನಾಡಿ ಜಿಲ್ಲೆಯ ಒಂದೆರಡು ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ನಮ್ಮ ಆಶಯ ಇಂದು ನಿರಂತರವಾಗಿ ಸಾಗಿ ರಾಜ್ಯದಂತ್ಯ ೧ ಸಾವಿರ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಹಂತಕ್ಕೆ ತಲುಪಿದೆ. ನೀರು ಮನುಷ್ಯರಿಗೆ ಮಾತ್ರವಲ್ಲದೆ ಸಕಲ ಜೀವ ಸಂಕುಲಕ್ಕೆ ಅಗತ್ಯವಾಗಿ ಬೇಕು ಎಂದರು.

ಕರಿಯಂಗಳ ಗ್ತಾ.ಪಂ. ಅಧ್ಯಕ್ಷೆ ರಾಧ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪೊಳಲಿ ಶ್ರೀರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಕ್ಷೇಮವನ ಟ್ರಸ್ಟ್‌ನ ಶ್ರದ್ಧಾ ಅಮಿತ್, ಎಂ.ಆರ್ ಪಿ.ಎಲ್‌ನ ಮುಖ್ಯಪ್ರಬಂಧಕ ಪ್ರದೀಪ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪೊಳಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ್ ನಾವಡ, ಬೂಡ ಅಧ್ಯಕ್ಷ ಬೇಬಿ ಕುಂದರ್, ಎಂಜಿನಿಯರ್ ತಾರಾನಾಥ ಜೆ. ಸಾಲ್ಯಾನ್, ಉದ್ಯೋಗ ಖಾತ್ರಿ ಯೋಜನೆಯ ಎಂಜಿನಿಯರ್ ಸುಶಾಂತ್, ಗುತ್ತಿಗೆದಾರ ಅಬೂಬಕ್ಕರ್, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ, ಕರಿಯಂಗಳ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಜು ಕೋಟ್ಯಾನ್, ಪಿಡಿಓ ವಸಂತಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಕುಮಾರ್, ಹಿಂದಿನ ಪಿಡಿಓ ಮಾಲಿನಿ ಉಪಸ್ಥಿತರಿದರು.

ಕರಿಯಂಗಳ ಗ್ರಾ.ಪ. ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪ್ಪಾಡಿ ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ವಂದಿಸಿದರು. ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.