ನವದೆಹಲಿ: ದೇಶದಲ್ಲಿ ಏರ್ ಕಂಡೀಷನ್ ಯಂತ್ರಗಳಿಗೆ ಹೊಸ ನಿಯಮವನ್ನು ಜಾರಿ ಮಾಡಲು ಕೇಂದ್ರ ಸರ್ಕಾರ  ಮುಂದಾಗಿದೆ. ಇನ್ನು ಮುಂದೆ ಹೊಸ ಹವಾನಿಯಂತ್ರಣ ಯಂತ್ರಗಳ (AC) ಕನಿಷ್ಠ ತಾಪಮಾನ 16 ಅಥವಾ 18 ಡಿಗ್ರಿಗಳ ಬದಲಿಗೆ 20 ಡಿಗ್ರಿ ಸೆಲ್ಸಿಯಸ್ ಮತ್ತು ಪ್ರಸ್ತುತ ಗರಿಷ್ಠ ಇರುವ 30 ಡಿಗ್ರಿಗಳ ಬದಲಿಗೆ ಗರಿಷ್ಠ 28 ಡಿಗ್ರಿಯೊಂದಿಗೆ ಬರಲಿದೆ.
ಈ ಆದೇಶ ಜಾರಿಗೆ ಬಂದ ನಂತರ ಮೂರು ವರ್ಷಗಳಲ್ಲಿ 18,000-20,000 ಕೋಟಿ ರೂ. ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಎಸಿ ಕನಿಷ್ಠ ತಾಪಮಾನವು 18°C ​​(ಕೆಲವು ಸಂದರ್ಭಗಳಲ್ಲಿ 16°C) ವರೆಗೆ ಹೋದರೆ ಗರಿಷ್ಠ 30°C ವರೆಗೆ ಏರಿಸಬಹುದಾಗಿದೆ. ಸರ್ಕಾರದ ಈ ಆದೇಶ ಜಾರಿಯಾದರೆ ಎಸಿ ತಾಪಮಾನ 20°C – 28°C ಗೆ ನಿರ್ಬಂಧಿಸುತ್ತದೆ. ಇದರರ್ಥ ಬಳಕೆದಾರರು ತಮ್ಮ ಎಸಿ ತಾಪಮಾನವನ್ನು 20°C ಗಿಂತ ಕಡಿಮೆ ಮತ್ತು 30°C ಗಿಂತ ಹೆಚ್ಚು ಹೊಂದಿಸಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ :  International Lynx Day ಜೂ.11 ಅಂತರಾಷ್ಟ್ರೀಯ ಲಿಂಕ್ಸ್ (ಕಾಡು ಬೆಕ್ಕು) ದಿನ

ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್‌ ಮಾತನಾಡಿ, ಇದೊಂದು ವಿಶಿಷ್ಟ ಪ್ರಯೋಗವಾಗಿದ್ದು, ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಮತ್ತು ವಿದ್ಯುತ್ ಬಿಲ್‌ಗಳಲ್ಲಿನ ಏರಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.ಈ ನಿಯಮ ಜಾರಿಯಾದ ನಂತರ ಗೃಹಬಳಕೆಯಿಂದ ಹಿಡಿದು ವಾಣಿಜ್ಯ ಸಂಸ್ಥೆಗಳಾದ ಕಚೇರಿ ಬ್ಲಾಕ್‌ಗಳು, ಮಾಲ್‌, ಹೋಟೆಲ್‌ ಮತ್ತು ಚಲನಚಿತ್ರ ಮಂದಿರಗಳ ಸೇರಿದಂತೆ ವಿವಿಧ ವಲಯಗಳಲ್ಲಿ ಬಳಸುವ ಎಸಿಗಳಿಗೆ ಅನ್ವಯವಾಗುತ್ತದೆ.

ಈಗಾಗಲೇ ಈ ಪ್ರಯೋಗ ಇಟಲಿ ಮತ್ತು ಜಪಾನ್‌ನಲ್ಲಿ ಜಾರಿಯಾಗಿದೆ. ರೋಮ್ ಸಾರ್ವಜನಿಕ ಕಟ್ಟಡಗಳಿಗೆ ಕನಿಷ್ಠ ತಾಪಮಾನವನ್ನು 23 ಡಿಗ್ರಿ ಸೆಲ್ಸಿಯಸ್‌ಗೆ ನಿಗದಿಪಡಿಸಿದರೆ, ಜಪಾನ್ 27 ಡಿಗ್ರಿ ಸೆಲ್ಸಿಯಸ್‌ ಫಿಕ್ಸ್‌ ಮಾಡಲಾಗಿದೆ. ಪ್ರತಿ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಳವು ವಿದ್ಯುತ್ ಬಳಕೆಯನ್ನು 6% ರಷ್ಟು ಕಡಿಮೆ ಮಾಡುತ್ತದೆ. 6 ಕೋಟಿ ನಗರ ಮನೆಗಳು ಮತ್ತು 12 ಲಕ್ಷ ವಾಣಿಜ್ಯ ಸಂಸ್ಥೆಗಳು ತಮ್ಮ ಎಸಿ ಸೆಟ್ಟಿಂಗ್ ಅನ್ನು 22 ರಿಂದ 24 ಡಿಗ್ರಿ ಸೆಲ್ಸಿಯಸ್ ನಡುವೆ ಇಟ್ಟುಕೊಂಡರೆ ವಾರ್ಷಿಕವಾಗಿ 12-15 ಬಿಲಿಯನ್ ಯೂನಿಟ್ ವಿದ್ಯುತ್ ಉಳಿಸುತ್ತದೆ ಮತ್ತು 4-5 ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಅಗತ್ಯವನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೇ ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.