ಚೆನ್ನೈ: ನಾಯಿ ಕಚ್ಚಿದ 3 ತಿಂಗಳ ನಂತರ ಯುವಕನೋರ್ವ ರೇಬೀಸ್‌ಗೆ ಬಲಿಯಾದ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. 31 ವರ್ಷದ ಅಯ್ಯಪ್ಪನ್ ಮೃತಪಟ್ಟ ಯುವಕ. ಮೂರು ತಿಂಗಳ ಹಿಂದೆ ಅಯ್ಯಪ್ಪನ್ ಅವರಿಗೆ ನಾಯಿ ಕಚ್ಚಿತ್ತು. ಆದರೆ ಅವರು ನಾಯಿ ಕಚ್ಚಿದ್ದನ್ನು ನಿರ್ಲಕ್ಷಿಸಿ ಚಿಕಿತ್ಸೆ ಪಡೆಯಲೇ ಇಲ್ಲ, ಪರಿಣಾಮ ನಾಯಿ ಕಚ್ಚಿದ ಮೂರು ತಿಂಗಳ ನಂತರ ಅವರ ಸಾವು ಸಂಭವಿಸಿದೆ. ರೇಬೀಸ್‌ಗೆ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಅಯ್ಯಪ್ಪನ್ ಅವರು ಕಾವಲ್ ಕಿನಾರು ಪ್ರದೇಶದ ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಇದನ್ನೂ ಓದಿ :ಮರಕ್ಕೆ ಡಿಕ್ಕಿ – 10ಕ್ಕೂ ಹೆಚ್ಚು ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ
ಒಬ್ಬ ವ್ಯಕ್ತಿಯಲ್ಲಿ ರೇಬೀಸ್ ಲಕ್ಷಣಗಳು ಕಾಣಿಸಿಕೊಂಡ ನಂತರ ಬದುಕುಳಿಯುವ ಸಾಧ್ಯತೆಗಳು ತೀರಾ ವಿರಳ. ರೇಬೀಸ್ ಸೋಂಕು ಕಾಣಿಸಿಕೊಂಡ 7 ರಿಂದ 14 ದಿನಗಳಲ್ಲಿ ಸೋಂಕಿತ ವ್ಯಕ್ತಿ ಸಾವಿಗೀಡಾಗುತ್ತಾನೆ. ಆದರೆ ನಾಯಿ ಅಥವಾ ಇತರ ಸಾಕು ಪ್ರಾಣಿಗಳು ಕಚ್ಚಿದ ಕೂಡಲೇ, ಗಾಯವನ್ನು ತೊಳೆಯುವುದು ಹಾಗೂ ಲಸಿಕೆ ಹಾಕಿಸಿಕೊಳ್ಳುವುದು,ಪೋಸ್ಟ್-ಎಕ್ಸ್‌ಪೋಸರ್ ಪ್ರೊಫಿಲ್ಯಾಕ್ಸಿಸ್ (PEP)ಚುಚ್ಚುಮದ್ದು ಪಡೆದರೆ ರೋಗವನ್ನು 100% ತಡೆಗಟ್ಟಬಹುದು. ಜಾಗತಿಕವಾಗಿ, ರೇಬೀಸ್‌ನಿಂದ ವರ್ಷಕ್ಕೆ ಅಂದಾಜು 59,000 ಸಾವುಗಳು ಸಂಭವಿಸುತ್ತಿವೆ. ಹೆಚ್ಚಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿಯೇ ನಾಯಿ ಕಡಿತದಿಂದ ಸಾವನ್ನಪುವವರ ಸಂಖ್ಯೆ ಹೆಚ್ಚಿದೆ.
ಒಮ್ಮೆ ರೇಬೀಸ್ ಇದ್ದ ನಾಯಿ ಕಚ್ಚಿದ ನಂತರ ಅಥವಾ ನಾಯಿ ಗೀರಿದ ನಂತರ ಆ ಗೀರು ಅಥವಾ ಗಾಯದ ಮೂಲಕ ವೈರಸ್ ಸೀದಾ ನರಗಳ ಮೂಲಕ ಮೆದುಳಿಗೆ ಸಾಗುತ್ತದೆ. ಮನುಷ್ಯನಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ, ವೈರಸ್ ಕೇಂದ್ರ ನರಮಂಡಲವನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಇದರಿಂದ ಮಾನಸಿಕ ಸಮಸ್ಯೆ, ಭಯ ನೀರು ಕಂಡರೆ ಭಯ ನಂತರ ಕೋಮಾ ಮತ್ತು ಸಾವಿಗೆ ಕಾರಣವಾಗುತ್ತದೆ.
ತಕ್ಷಣ ಚಿಕಿತ್ಸೆ ಪಡೆಯಿರಿ: ರೇಬೀಸ್ ಇದೆ ಎಂದು ಶಂಕಿಸಲಾದ ಪ್ರಾಣಿಯಿಂದ ಕಡಿತಕ್ಕೊಳಗಾದರೆ ಗಾಯವನ್ನು ತಕ್ಷಣವೇ ಸೋಪ್ ಮತ್ತು ನೀರಿನಿಂದ ತೊಳೆಯಿರಿ ಮತ್ತು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಲಸಿಕೆ ಪಡೆಯಿರಿ. ಸಾಕು ನಾಯಿ ಆಗಿದ್ದರೂ ನಿರ್ಲಕ್ಷ್ಯ ಬೇಡ. ಮನೆಯ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸುವುದನ್ನು ಮರೆಯಬೇಡಿ.
