ನವದೆಹಲಿ: ಎರಡು ಅವಧಿಯಲ್ಲೂ ದೇಶದ ಜನತೆಯಲ್ಲಿ ವಿಶ್ವಾಸ ಮೂಡಿಸಿದೆವು. ಈಗ ಮೂರನೇ ಬಾರಿ ಎನ್‌ಡಿಎಗೆ ಆಶೀರ್ವಾದ ಸಿಕ್ಕಿದೆ. ಇದಕ್ಕಾಗಿ ನಾನು ತಲೆ ಬಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದರು.

ಫಲಿತಾಂಶದ ಬಳಿಕ ಬಿಜೆಪಿ ಕಚೇರಿಯಲ್ಲಿ ಇಂದು ಪಕ್ಷದ ಕಾರ್ಯಕರ್ತರು ಹಾಗೂ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಈ ಪ್ರೀತಿ, ಈ ಆಶೀರ್ವಾದಕ್ಕಾಗಿ ನಾನು ದೇಶದ ಜನರಿಗೆ ಋಣಿ. ಇಂದು ಮಂಗಳಕರ ದಿನ, ಈ ಪಾವನ ದಿನದಂದು ಮೂರನೇ ಬಾರಿ ಸರ್ಕಾರ ರಚನೆಗೆ ತಯಾರಿದೆ. ನಾವೆಲ್ಲರೂ ಜನರಿಗೆ ಅಭಾರಿಯಾಗಿದ್ದೇವೆ. ದೇಶದ ಜನರು ಬಿಜೆಪಿ, ಎನ್‌ಡಿಎ ಮೇಲೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವಿಜಯ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಜಯ. ಇದು ವಿಕಸಿತ ಭಾರತದ ಜಯ. ಇದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ಗೆ ಸಿಕ್ಕ ಜಯ. 140 ಕೋಟಿ ಜನರ ಗೆಲುವಾಗಿದೆ ಎಂದರು.

ನಾನು ಚುನಾವಣಾ ಆಯೋಗಕ್ಕೂ ಅಭಿನಂಧನೆ ಸಲ್ಲಿಸುತ್ತೇನೆ. ವಿಶ್ವದ ದೊಡ್ಡ ಚುನಾವಣೆಯನ್ನು ಅಚ್ಚುಕಟ್ಟಾಗಿ ಮಾಡಿದೆ. ನೂರು ಕೋಟಿ ಮತದಾರರು, 11 ಕೋಟಿ ಬೂತ್, 55 ವೋಟಿಂಗ್ ಮಷಿನ್, ತೀವ್ರ ಬಿಸಿಲಿನ ನಡುವೆ ಕರ್ತವ್ಯ ನಿಭಾಯಿಸಿದ್ದಾರೆ. ಭದ್ರತಾ ಪಡೆಗಳು ನಿಷ್ಠೆಯಿಂದ ಕೆಲಸ ಮಾಡಿವೆ. ಚುನಾವಣೆಯ ಪೂರ್ಣ ವ್ಯವಸ್ಥೆ, ಎಲ್ಲ ಭಾರತೀಯರಿಗೆ ಹೆಮ್ಮೆ ಪಡುವ ಸಂಗತಿ. ಇದಕ್ಕೆ ವಿಶ್ವದಲ್ಲಿ ಮತ್ತೇಲ್ಲಿ ಉದಾಹರಣೆ ಇಲ್ಲ ಎಂದು ಸ್ಮರಿಸಿದರು.

ಜಮ್ಮು ಕಾಶ್ಮೀರದ ಮತದಾರರು ದಾಖಲೆಯ ಮತದಾನದ ಮೂಲಕ ಉತ್ಸಾಹ ತೋರಿದ್ದಾರೆ. ಈ ವಿಜಯದ ದಿನದಂದು ದೇಶದ ಜನರಿಗೆ, ಎಲ್ಲ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. 1962 ನಂತರ ಯಾವುದೇ ಪಕ್ಷ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರಲಿಲ್ಲ. ಮೊದಲ ಬಾರಿಗೆ ಎರಡು ಅವಧಿಯ ಬಳಿಕ ಮೂರನೇ ಬಾರಿಗೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಚುನಾವಣೆಗಳಲ್ಲಿ ಎನ್‌ಡಿಎಗೆ ಭವ್ಯ ವಿಜಯ ಸಿಕ್ಕಿದೆ. ಅರುಣಾಚಲ, ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂನಲ್ಲಿ ಕಾಂಗ್ರೆಸ್ ನಾಶವಾಗಿದೆ. ಅವರಿಗೆ ಠೇವಣಿ ಪಡೆಯುವುದು ಕಷ್ಟವಾಗಿದೆ. ಬಿಜೆಪಿ ಒಡಿಶಾದಲ್ಲಿ ಸರ್ಕಾರ ಮಾಡುತ್ತಿದೆ. ಜಗನ್ನಾಥನ ಕೃಪೆಯಿಂದ ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ. ಕೇರಳದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದೇವೆ. ಕೇರಳದಲ್ಲಿ ಸೇವೆ ಜೊತೆಗೆ ನಮ್ಮ ಕಾರ್ಯಕರ್ತರು ಸಂಘರ್ಷ ಮಾಡಿದ್ದಾರೆ ಎಂದು ಹೇಳಿದರು.

ತೆಲಂಗಾಣದಲ್ಲಿ ನಮ್ಮ ಸಂಖ್ಯೆ ದ್ವಿಗುಣವಾಗಿದೆ. ಛತ್ತೀಸಗಢ, ದೆಹಲಿ, ಹಿಮಾಚಲ, ಮಧ್ಯಪ್ರದೇಶ ಸೇರಿದಂತೆ ಹಲವು ಕಡೆ ಕ್ಲೀನ್ ಸ್ವೀಪ್ ಮಾಡಿದೆ.‌ ವಿಧಾನಸಭೆ ಮತದಾರರಿಗೂ ವಿಶೇಷ ಧನ್ಯವಾದಗಳು. ನಿಮ್ಮ ವಿಶ್ವಾಸಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ. ನಾನು ಭರವಸೆ ನೀಡುತ್ತೇನೆ. ಆಂಧ್ರಪ್ರದೇಶ, ಬಿಹಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ದೇಶ ನಿರಾಸೆಯಲ್ಲಿ ಮುಳುಗಿತ್ತು. ಪ್ರತಿದಿನ ಪತ್ರಿಕೆ ಭ್ರಷ್ಟಾಚಾರದಿಂದ ತುಂಬಿತ್ತು. ನಮ್ಮ ಸರ್ಕಾರ ವಿಶ್ವಾಸ ಮೂಡಿಸುವ ಕೆಲಸ ಮಾಡಿತು. ನಿಯತ್ತಿನಿಂದ ನಾವು ಕೆಲಸ ಮಾಡಿದೆವು. ಎರಡನೇ ಬಾರಿಗೆ ಅಧಿಕಾರಕ್ಕೆ ಬಂದೆವು. ಎರಡನೇ ಅವಧಿಯೂ ವಿಶ್ವಾಸ ಮೂಡಿಸಿದೆವು. ಈಗ ಮೂರನೇ ಬಾರಿ ಎನ್‌ಡಿಎಗೆ ಆಶೀರ್ವಾದ ಸಿಕ್ಕಿದೆ. ಇದಕ್ಕಾಗಿ ನಾನು ತಲೆ ಬಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ನನ್ನ ತಾಯಿ ಹೋದ ಮೇಲೆ ಇದು ಮೊದಲ ಚುನಾವಣೆ. ನಾನು ಹೋದ ಕಡೆಯೆಲ್ಲಾ ನನಗೆ ತಾಯಂದಿರಿಗೇನು ಕಮ್ಮಿ ಇರಲಿಲ್ಲ. ತಾಯಂದಿರು, ಸಹೋದರಿಯರು ಅಭೂತಪೂರ್ವವಾದ ಪ್ರೀತಿಯನ್ನು ನೀಡಿದರು. ಮಹಿಳೆಯರು ಎಲ್ಲಾ ದಾಖಲೆ ಮೀರಿ ಮತದಾನ ಮಾಡಿದರು. ಇದನ್ನ ಶಬ್ದದಲ್ಲಿ ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ಕೋಟಿ ಕೋಟಿ ತಾಯಂದಿರಿರುವ ಹೊಸ ಪ್ರೇರಣೆ ನೀಡಿದ್ದಾರೆ ಎಂದು ನೆನಪಿಸಿಕೊಂಡರು.

ನಮ್ಮ ಮುಂದೆ ವಿಕಸಿತ ಭಾರತದ ದೊಡ್ಡ ಸಂಕಲ್ಪ ಇದೆ. ನಮಗೆ ಮೂರನೇ ಬಾರಿಗೆ ನಮ್ಮ ಸಂಕಲ್ಪಕ್ಕೆ ಪ್ರೇರಣೆ ನೀಡಿದ್ದಾರೆ. ಬಿಜೆಪಿ ಗಳಿಸಿದಷ್ಟು ಸ್ಥಾನಗಳನ್ನು ನಮ್ಮ ವಿರೋಧಿಗಳು ಒಂದಾದರೂ ಆ ಪ್ರಮಾಣದ ಸ್ಥಾನಗಳನ್ನು ಗಳಿಸಿಲ್ಲ. ನಿಮ್ಮ ಶ್ರಮ ನನಗೆ ನಿರಂತರ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ನೀವೂ ಎರಡು ಹೆಜ್ಜೆ ಇಟ್ಟರೆ ನಾನು ನಾಲ್ಕು ಹೆಜ್ಜೆ ಇಡುತ್ತೇನೆ. ದೇಶವನ್ನು ಮುಂದೆ ನಡೆಸೋಣ. ಮೂರನೇ ಅವಧಿ ಕಠಿಣ ನಿರ್ಧಾರಗಳ ಹೊಸ ಅಧ್ಯಾಯ ಬರೆಯಲಿದೆ. ಎಲ್ಲ ವರ್ಗಗಳ ಅಭಿವೃದ್ಧಿಯಾಗಲಿದೆ. ಎಸ್ಸಿ-ಎಸ್ಟಿ, ಒಬಿಸಿ ಸಮುದಾಯದ ಅಭಿವೃದ್ಧಿಯಾಗಲಿದೆ ಎಂದು ಭರವಸೆ ನೀಡಿದರು.

ನಮ್ಮ ರಕ್ಷಣಾ ಇಲಾಖೆ ಎಲ್ಲಿವರೆಗೆ ಸ್ವಾವಲಂಬಿಯಾಗುವುದಿಲ್ಲವೋ ಅಲ್ಲಿವರೆಗೂ ನಿಲ್ಲುವುದಿಲ್ಲ. ಪ್ರತಿ ಕ್ಷೇತ್ರವನ್ನು ಆತ್ಮನಿರ್ಭರ ಮಾಡಲಿದ್ದೇವೆ. ಮುಂದಿನ ಅವಧಿ ಹಸಿರು ಶಕ್ತಿ ಕಾಲ, ಇದಕ್ಕೆ ಆದ್ಯತೆ ನೀಡಲಿದ್ದೇವೆ. ಇಂದಿನ ಭಾರತ ವಿಶ್ವದ ಭಾಗವಾಗಿದೆ. ಕೊರೊನಾ ಅವಧಿಯಲ್ಲಿ ವ್ಯಾಕ್ಸಿನ್ ಮೂಲಕ ವಿಶ್ವಕ್ಕೆ ನೆರವು ನೀಡಿತು ಭಾರತ. ಕೆಲಸ ಮಾಡುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇವೆ. ಭ್ರಷ್ಟಾಚಾರದ ವಿರುದ್ಧ ವೇಗವಾಗಿ ಪ್ರಹಾರ ಮಾಡಬೇಕಿದೆ. ಡಿಜಿಟಲ್ ಇಂಡಿಯಾ ಭ್ರಷ್ಟಾಚಾರವನ್ನು ತಡೆದಿದೆ. ಭ್ರಷ್ಟಾಚಾರ ವಿರುದ್ಧದ ಕ್ರಮ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಸೇವಾ ಭಾವನೆಯ ಮುಂದೆ ರಾಜಕೀಯ ಏನು ಅಲ್ಲ ಎಂದು ಅಭಿಪ್ರಾಯಪಟ್ಟರು.