ಬಂಟ್ವಾಳ: ಶಾಲೆ ಎಂಬುದು ಸರ್ವ ಧರ್ಮದ ದೇಗುಲ, ಆದುದರಿಂದ ಶಾಲೆಗಳಿಗೆ ಧಾನ ಮಾಡಿದರೆ ಒಂದು ದೇವಸ್ಥಾನ ಕಟ್ಟಿದಂತೆ ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದರು.

ಅವರು ಜ.13 ರಂದು ಬಂಟ್ವಾಳ ತಾಲೂಕಿನ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿವೇಕ ತರಗತಿ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಮಕ್ಕಳಿಗೆ ಮೀಸಲಿಟ್ಟು ಸಭಾ ಕಾರ್ಯಕ್ರಮಗಳು ಚುಟುಕಾಗಿ ನಡೆಯಬೇಕು ಎಂದರು.

ವಿವೇಕಾ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ರಘು ಸಫಲ್ಯ ಉದ್ಘಾಟಿಸಿದರು ಬಳಿಕ ಮಾತನಾಡಿ ಒಂದು ಶಾಲೆ ಅಭಿವೃದ್ದಿ ಆದರೆ ಊರೇ ಅಭಿವೃದ್ಧಿ ಆದಂತೆ, ಎಷ್ಟು ದೊಡ್ಡ ವ್ಯಕ್ತಿ ಆದ್ರೂ ತಾನು ಕಲಿತ ಊರಿನ ಶಾಲೆಯನ್ನು ಮರೆಯಬಾರದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನರಿಕೊಂಬು ನಾಲ್ಕೈತಾಯ ಪಂಜುರ್ಲಿ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ್ ಬಂಗೇರ ನಿರ್ಮಾಲ್ ಮಾತನಾಡಿ ಮಕ್ಕಳ ಪ್ರತಿಭೆಗಳನ್ನು ತಮ್ಮ ಪೋಷಕರ ಮುಂದೆ ಪ್ರದರ್ಶಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಆಗಿದೆ ಎಂದರು.

ನ್ಯಾಯವಾದಿ, ಬಂಟ್ವಾಳ ಕಥೋಲಿಕ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೀವನ್ ಲಾಯ್ಡ್ ಪಿಂಟೋ ಮಾತನಾಡಿ ವಿದ್ಯಾದಾನ ಎನ್ನುವುದು ಶ್ರೇಷ್ಠದಾನವಾಗಿದೆ, ಶಾಲಾ ವಾರ್ಷಿಕೋತ್ಸವಗಳಲ್ಲಿ ನೀಡುವಂತ ವರದಿಯು ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು, ಮಕ್ಕಳ ಪ್ರಗತಿ, ಶಾಲೆಯ ಬೆಳವಣಿಗೆಗೆ ಸಿಕ್ಕ ಸಹಕಾರದ ಬಗ್ಗೆ ಊರಿನವರಿಗೆ ಹಾಗೂ ಮಕ್ಕಳ ಪೋಷಕರಿಗೆ ತಿಳಿಯುವ ಅವಕಾಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ದಾನಿಗಳಾದ ದೀಪಕ್ ಕೋಡಿ, ದಿವ್ಯ ರಾಘವೇಂದ್ರ, ದೀಪ್ತಿ ಚರಣ್ ರಾಜ್, ಅಮಿತಾ ಗಿರೀಶ್, ಜಂಪ್ ರೋಲ್ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲಾ ವಿದ್ಯಾರ್ಥಿ ಸುನಿಲ್ ಚೌಹಾನ್, ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಶ್ರೀವಾಣಿ, ಶ್ರೀಹರ, ಮಕ್ಕಳಿಗೆ ಉಚಿತ ಯಕ್ಷಗಾನ ತರಬೇತಿ ನೀಡುತ್ತಿರುವ ಓಂಪ್ರಕಾಶ್, ಕೋಕೋ ಆಟ ತರಬೇತಿ ನೀಡುತ್ತಿರುವ ಜಯಪ್ರಕಾಶ್. ಶಾಲೆಯಲ್ಲಿ ಬಿಸಿ ಊಟ ತಯಾರಿಸುವ ಸಿಬ್ಬಂದಿ, ಶಾಲಾ ಆಯಾ, ಮೊದಲಾದವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು.

ಮಕ್ಕಳ ಪೋಷಕರಿಗೆ ನಡೆಸಿದಂತ ವಿವಿಧ ಸ್ಪರ್ಧೆಗಳ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಚಿತ್ರಾವತಿ, ರಂಜಿತ್ ಕೆದ್ದೇಲ್, ಏರಮಲೆ ಭದ್ರಕಾಳಿ ದೇವಸ್ಥಾನ ಅರ್ಚಕ ಕೇಶವ ಶಾಂತಿ, ನರಿಕೊಂಬು ಮೂರ್ತೆದಾರ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ ಅಮೀನ್, ವೀರ ಮಾರುತಿ ವ್ಯಾಯಾಮ ಶಾಲೆ ಮಾರುತಿ ನಗರದ ಅಧ್ಯಕ್ಷ ಚಂದ್ರಹಾಸ ಕೋಡಿಮಜಲು, ಉದ್ಯಮಿ ಮಾಧವ ಕುಲಾಲ್ ಶೇಡಿಗುರಿ, ಮೊದಲಾದವರು ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಪ್ರಾಸ್ತಾವಿಕ ಮಾತನಾಡಿ ಸರಕಾರದ ಯಾವುದೇ ಅನುದಾನಕ್ಕೆ ಕಾಯದೆ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ನೀಲಾನಕಾಶೆ ರೆಡಿಯಾಗಿದ್ದು ಊರಿನ ವಿದ್ಯಾಭಿಮಾನಿಗಳು ಹಾಗೂ ಮಕ್ಕಳ ಪೋಷಕರು ಉದಾರ ಮನಸ್ಸು ಮಾಡಿ ಈ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಮುಖ್ಯ ಶಿಕ್ಷಕಿ ಪ್ರೇಮ ಎಂ, ಶಾಲಾ ವರದಿ ವಾಚಿಸಿದರು. ಶಾಲಾ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಸ್ವಾಗತಿಸಿ, ಸಹ ಶಿಕ್ಷಕಿ ವಿಲ್ಮಾ ಪ್ರಸಿಲ್ಲಾ ಪಿಂಟೋ ಬಹುಮಾನಿತರ ಪಟ್ಟಿ ವಾಚಿಸಿ, ಅತಿಥಿ ಶಿಕ್ಷಕಿ ಬಬಿತಾ ವಂದಿಸಿ, ಶಾಲಾ ದೈಹಿಕ ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

ಶಾಲಾ ಮಕ್ಕಳು ನಡೆಸಿಕೊಟ್ಟ ಅಕ್ಷರ ಯೋಗಿ ಅರೆಕಲ ಹಾಜಬ್ಬ ಜೀವನ ಚರಿತೆಯ ರೂಪಕ ಹಾಗೂ ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ನ ಯಕ್ಷ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಓಂ ಪ್ರಕಾಶ್ ರವರ ಮಾರ್ಗದರ್ಶನದಲ್ಲಿ ನಡೆದ ಜಾಮವತಿ ಕಲ್ಯಾಣ ಯಕ್ಷಗಾನ ಬಹಳ ಪ್ರಶಂಸೆಗೆ ಪಾತ್ರವಾಯಿತು.