ನಿಮಗೆ ಗೊತ್ತಾ? ಸೊಳ್ಳೆಯಿಂದ ಜೀವಸಂಕುಲ ಉಳಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ಆ ನಿಟ್ಟಿನಲ್ಲಿ ಒಂದು ಕಾರ್ಯವನ್ನೂ ವಿಜ್ಞಾನಿಗಳು ಮಾಡಿದ್ದಾರೆ. ಈ ಪ್ರಯೋಗ ಅಮೆರಿಕಗೆ ಸೇರಿದ ಹವಾಯ್ (Hawaii) ದ್ವೀಪದಲ್ಲಿ ಅಂತಹದ್ದೊಂದು ಪ್ರಯೋಗ ಮಾಡಿದ್ದಾರೆ. ಏನಿದು ಪ್ರಯೋಗ? ಸೊಳ್ಳೆಗಳಿಂದಾಗುವ ಪ್ರಯೋಜನ ಏನು? ಜೀವಸಂಕುಲ ಉಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಹವಾಯಿಯ ದೂರದ ಕಾಡುಗಳಲ್ಲಿ ವಿಜ್ಞಾನಿಗಳು ದೈತ್ಯ ಡ್ರೋನ್ ಬಳಸಿ ಸೊಳ್ಳೆಗಳ ಹಿಂಡುಗಳನ್ನು ಬಿಡುತ್ತಿದ್ದಾರೆ. ಇದೊಂಥರ ವಿಚಿತ್ರ ಪರಿಪಾಠ ಅಂತ ಅನ್ನಿಸಬಹುದು. ಆದರೆ, ಅದರಲ್ಲೊಂದು ಉದ್ದೇಶ ಇದೆ. ವಿಜ್ಞಾನಿಗಳು ಹವಾಯಿಯಲ್ಲಿ ಜೀವವನ್ನು ಪುನರುತ್ಥಾನಗೊಳಿಸಲು ಈ ಕೀಟಗಳನ್ನು ಬಿಡುತ್ತಿದ್ದಾರೆ.
ಈ ಸುಂದರ ಉಷ್ಣವಲಯದ ದ್ವೀಪವು ಅಳಿವಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದು ಕಾಲದಲ್ಲಿ ಹವಾಯಿಯಲ್ಲಿ ಹೇರಳವಾಗಿದ್ದ ಹನಿಕ್ರೀಪರ್ಸ್ (Honeycreepers) ಹೆಸರಿನ ವರ್ಣರಂಜಿತ ಹಾಡುಹಕ್ಕಿಗಳು, ಆಕ್ರಮಣಕಾರಿ ಸೊಳ್ಳೆಗಳಿಂದ ಹರಡುವ ಪಕ್ಷಿ ಮಲೇರಿಯಾಗೆ ಬಲಿಯಾಗುತ್ತಿವೆ. ಪಕ್ಷಿಗಳು ಬದುಕುಳಿಯಲು ಹೆಣಗಾಡುತ್ತಿವೆ. ಈ ಪಕ್ಷಿಗಳ ಸಂತಾನ ಮತ್ತೆ ವೃದ್ಧಿಯಾಗಬೇಕೆಂದು ವಿಜ್ಞಾನಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ. ಪಕ್ಷಿಗಳ ಸಂತಾನೋತ್ಪತ್ತಿಗೆ ಅಡ್ಡಿಪಡಿಸುವ ಬ್ಯಾಕ್ಟೀರಿಯಾದ ತಳಿಗಳನ್ನು ಬೇರೆಡೆಗೆ ಸಾಗಿಸಲು, ಪ್ರಯೋಗಾಲಯದಲ್ಲಿ ಸಾಕಿದ ಮತ್ತು ಕಚ್ಚದ ಗಂಡು ಸೊಳ್ಳೆಗಳನ್ನು ಬಿಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.
ಮಲೇರಿಯಾ ಹರಡುತ್ತಿರುವ ಹನಿಕ್ರೀಪರ್ ಆವಾಸಸ್ಥಾನಗಳಿಗೆ ಈ ವಿಶೇಷ ಗಂಡು ಸೊಳ್ಳೆಗಳನ್ನು ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಆ ಮೂಲಕ ವಿಜ್ಞಾನಿಗಳು ಕಚ್ಚುವ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ರೋಗ ಹರಡುವಿಕೆಯನ್ನು ನಿಗ್ರಹಿಸಲು ಕ್ರಮಕೈಗೊಂಡಿದ್ದಾರೆ.
ಬರ್ಡ್ಸ್, ನಾಟ್ ಸೊಳ್ಳೆಗಳು’ ಯೋಜನೆ ಮೂಲಕ ಈ ಕ್ರಮವಹಿಸಲಾಗಿದೆ. ಇದು ಸ್ಥಳೀಯ ಹವಾಯಿಯನ್ ಪಕ್ಷಿಗಳನ್ನು ರಕ್ಷಿಸಲು ಕೆಲಸ ಮಾಡುವ ಸಂಸ್ಥೆಗಳ ಒಕ್ಕೂಟವಾಗಿದೆ. ಯೋಜನೆಯನ್ನು 2023ರ ನವೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಮಾಯಿ ಮತ್ತು ಕೌಯಿಯಲ್ಲಿನ ಹನಿಕ್ರೀಪರ್ ಆವಾಸಸ್ಥಾನಗಳಲ್ಲಿ 40 ಮಿಲಿಯನ್‌ಗಿಂತಲೂ ಹೆಚ್ಚು ಗಂಡು ಸೊಳ್ಳೆಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಸೊಳ್ಳೆಗಳನ್ನು ಬಿಡುವುದರಿಂದ ಪಕ್ಷಿಗಳ ಆವಾಸಸ್ಥಾನದ ಕಾಡುಗಳಿಗೆ ಬೇರೆ ಸೊಳ್ಳೆಗಳು ಹೋಗಲು ಸಾಧ್ಯವಿಲ್ಲ ಎಂದು ಡ್ರೋನ್ ಕಾರ್ಯವನ್ನು ಮುನ್ನಡೆಸುತ್ತಿರುವ ಅಮೆರಿಕನ್ ಬರ್ಡ್ ಕನ್ಸರ್ವೆನ್ಸಿಯ ಹವಾಯಿ ಕಾರ್ಯಕ್ರಮ ನಿರ್ದೇಶಕ ಕ್ರಿಸ್ ಫಾರ್ಮರ್ ತಿಳಿಸಿದ್ದಾರೆ.
ಆಕ್ರಮಣಕಾರಿ ಸೊಳ್ಳೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಅನೇಕ ಸ್ಥಳೀಯ ಪಕ್ಷಿ ಪ್ರಭೇದಗಳು ಶಾಶ್ವತವಾಗಿ ಕಣ್ಮರೆಯಾಗುತ್ತವೆ. ಕನಿಷ್ಠ 33 ಜಾತಿಯ ಹನಿಕ್ರೀಪರ್‌ಗಳು ಈಗ ಅಳಿದುಹೋಗಿವೆ. ಮೌಯಿಯಲ್ಲಿರುವ ಕಿವಿಕಿಯು, ಅಕೊಹೆಕೊಹೆ ಮತ್ತು ಕೌಯಿಯಲ್ಲಿರುವ ಅಕೆಕೆ ಸೇರಿದಂತೆ ಉಳಿದಿರುವ 17 ಜಾತಿಗಳಲ್ಲಿ ಹಲವು ಪಕ್ಷಿಗಳು ಅಳಿವಿನಂಚಿನಲ್ಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಂತಾನೋತ್ಪತ್ತಿ ಸಮಸ್ಯೆ ಇರುವ ಸೊಳ್ಳೆಗಳನ್ನು ಬಿಡುಗಡೆ ಮಾಡುವುದರಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆದರೆ, ಹನಿಕ್ರೀಪರ್ ಸಂಖ್ಯೆಯನ್ನು ಉಳಿಸಲು ಈ ಸೊಳ್ಳೆಗಳಿಗೆ ಸಾಧ್ಯವಾಗಬಹುದು ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ, ಸೊಳ್ಳೆಗಳು ಹವಾಯಿಯಲ್ಲಿ ವಾಸಿಸುವುದಿಲ್ಲ. ಆದರೆ 1826 ರಲ್ಲಿ ಒಂದು ತಿಮಿಂಗಿಲ ಬೇಟೆಯ ಹಡಗು ಆಕಸ್ಮಿಕವಾಗಿ ಅವುಗಳನ್ನು ದ್ವೀಪಗಳಿಗೆ ತಂದು ಬಿಟ್ಟಿವೆ. ಅವು ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ ವೃದ್ಧಿಯಾಗಿ ಅಭಿವೃದ್ಧಿ ಹೊಂದಿದವು. ಈಗ ಪಕ್ಷಿ ಪ್ರಭೇದಕ್ಕೆ ಕಂಟಕವಾಗಿ ಪರಿಣಮಿಸಿವೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಗಾದೆಯಂತೆ, ಆಕ್ರಮಣಕಾರಿ ಸೊಳ್ಳೆಗಳನ್ನು ಮಟ್ಟ ಹಾಕಲು ಸಾಕಿದ ಸೊಳ್ಳೆಗಳ ಅಸ್ತ್ರ ಪ್ರಯೋಗವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ