ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಸತತ 3ನೇ ಬಾರಿಗೆ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಮೇ 14 ರಂದು (ಮಂಗಳವಾರ) ಬೆಳಗ್ಗೆ ಕಾಲಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಶುಭಗಳಿಗೆಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನಾ ದಿನವಾದ ಸೋಮವಾರ (ಇಂದು) ವಾರಣಾಸಿಯಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಮೋದಿ ನಾಮಪತ್ರ ಸಲ್ಲಿಕೆ ವೇಳೆ ಲಕ್ಷಾಂತರ ಜನ ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ವಾರಣಾಸಿಯಲ್ಲಿ ಅದ್ಧೂರಿ ರೋಡ್ ಶೋ (Modi Road Show) ನಡೆಯಲಿದೆ. ಶಂಖನಾದ , ಡೋಲು, ವಾದ್ಯಗೋಷ್ಠಿಗಳು ಮೊಳಗಲಿವೆ, ಅನೇಕ ಪಂಡಿತರು ಮಂತ್ರಗಳ ಪಠಣ ಮಾಡಲಿದ್ದಾರೆ. ಹಾಗಾಗಿ ಹಬ್ಬದ ವಾತಾವರಣವೇ ಅಲ್ಲಿ ಸೃಷ್ಟಿಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಬಿಗಿ ಭದ್ರತೆ:
ನಾಮಪತ್ರ ಸಲ್ಲಿಕೆಗೂ ಮುನ್ನಾದಿನ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದ್ವಾರದಿಂದ ಅದ್ಧೂರಿ ರೋಡ್ ಶೋ ಆರಂಭವಾಗಲಿದೆ. ಅಲ್ಲಿ ಮೋದಿಯವರು ಬಿಎಚ್‌ಯು ಸಂಸ್ಥಾಪಕ ಮಹಾಮಾನ ಪಂ. ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕಾಶಿ ವಿಶ್ವನಾಥ ಧಾಮದ ಗೇಟ್ ಸಂಖ್ಯೆ-4 ರಲ್ಲಿ ರೋಡ್ ಶೋ ಮುಕ್ತಾಯಗೊಳ್ಳಲಿದೆ.
ಮುಸ್ಲಿಂ ಸಮುದಾಯದಿಂದ ವಿಶೇಷ ಸ್ವಾಗತ:
ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದಾರೆ. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಲಿದೆ. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಲಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಗುವುದು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಲಿದ್ದಾರೆ ಎಂದು ಕಾಶಿ ಪ್ರದೇಶ ಬಿಜೆಪಿ ವಕ್ತಾರ ನವರತನ್ ರಾಠಿ ತಿಳಿಸಿದ್ದಾರೆ.
ರೋಡ್ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ರಾತ್ರಿ ಬನಾರಸ್ ಲೋಕೋಮೋಟಿವ್ ವರ್ಕ್ಸ್ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದು, ಅಲ್ಲಿಯೇ ಪ್ರಮುಖ ನಾಗರಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಮೇ 14 ರಂದು (ಮಂಗಳವಾರ) ಅವರು ಕಾಲ ಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ ಮತ್ತು ನಂತರ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಾರೆ.
ಮೋದಿ ಅವರು 2014 ಮತ್ತು 2019ರಲ್ಲಿ ವಾರಣಾಸಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಸತತ 3ನೇ ಅವಧಿಗೆ ವಾರಣಾಸಿಯಿಂದಲೇ ಸ್ಪರ್ಧಿಸುತ್ತಿರುವ ಮೋದಿ ಹ್ಯಾಟ್ರಿಕ್ ಗೆಲುವಿನೊಂದಿಗೆ 3ನೇ ಬಾರಿಗೆ ಪ್ರಧಾನಿಯಾಗುವ ನಿರೀಕ್ಷೆಯಲ್ಲಿದ್ದಾರೆ.