ಬಂಟ್ವಾಳ : 2025-26 ನೇ ಸಾಲಿನ ತ್ರೈಮಾಸಿಕ ಕೆ.ಡಿ.ಪಿ‌.ಸಭೆ ಬಿಸಿರೋಡಿನ ತಾಲೂಕು ಪಂಚಾಯತ್ ಎಸ್.ಜಿ.ಎಸ್ .ವೈ ಸಭಾಂಗಣದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ  ತಹಶೀಲ್ದಾರ್  ಹಾಗೂ ಪೋಲೀಸ್ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಗರಂ ಆದ ಶಾಸಕರು ಎರಡು ಇಲಾಖೆಗೆ ಸಂಬಂಧಿಸಿದಂತೆ ಪ್ರಮುಖವಾದ ವಿಚಾರಗಳು ಚರ್ಚೆ ಮಾಡಲು ಇರುವುದರಿಂದ ಸಭೆಗೆ ಕರೆಸುವಂತೆ ತಾ.ಪಂ.ಇ.ಒ.ಗೆ ಸೂಚಿಸಿದರು. ಇವರ ಜೊತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಸರ್ವೇ ಇಲಾಖೆ ಅಧಿಕಾರಿ ಕೂಡ ಸಭೆಯಲ್ಲಿ ಗೈರು ಹಾಜರಿರುವವುದನ್ನು ಪ್ರಶ್ನಿಸಿದ ಶಾಸಕರು ಸಭೆ ಮುಂದುವರಿಸಬೇಕಾ ? ಅಥವಾ ನಿಲ್ಲಿಸಬೇಕಾ ಎಂದು ಇ.ಒ.ಅವರನ್ನು ‌ಕೇಳಿದರು. ಸಭೆ ಆರಂಭವಾದ ಸುಮಾರು ಅರ್ಧ ತಾಸುಗಳ ಬಳಿಕ ಗೈರು ಹಾಜರಿದ್ದ ಅಧಿಕಾರಿಗಳು ಸಭೆಯಲ್ಲಿ ಸೇರಿಕೊಂಡ ಘಟನೆ ನಡೆಯಿತು.

ಧ್ವನಿ ಮಾಲಿನ್ಯ ಕಾಯ್ದೆಯ ಪ್ರಕಾರ ಶಬ್ದವು 50 ಡೆಸಿಬಲ್ ಮೀರಬಾರದು ನಿಯಮವಿದೆ ಎಂದು ಪೋಲೀಸ್ ಇಲಾಖೆ ಅದೇಶವನ್ನು ಹೊರಡಿಸಿ ಧಾರ್ಮಿಕ ಆಚರಣೆಗಳ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿರುವ ಕ್ರಮವನ್ನು ಪ್ರಸ್ತಾಪಿಸಿ ಶಾಸಕರು, ಕೆ.ಡಿ.ಪಿ ಸಭೆಯಲ್ಲಿ ಮೈಕ್ ಬಳಸದೆ ಸಭೆ ನಡೆಸಿ ಗಮನ ಸೆಳೆದರು. ಇದನ್ನೂ ಓದಿ : ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾನ್ವಿ.ಕೆ. ಅವರಿಗೆ ಚಿನ್ನದ ಪದಕ

ಮೈಕ್ ಬಳಸಿದರೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಬಹುದು ಎಂದು ಅವರು ಹೇಳಿ ಸರಕಾರದ  ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದರು. ದ.ಕ.ಜಿಲ್ಲೆ ಕೃಷಿ ಸಂಸ್ಕೃತಿಯ ಆಧಾರದ ಮೇಲೆ ನಡೆಯುತ್ತಿದ್ದು, ಇಲ್ಲಿ ವರ್ಷಪೂರ್ತಿ ನಡೆಯುವ  ಧಾರ್ಮಿಕ ಆಚರಣೆಗಳ ಮೇಲೆ ಜಿಲ್ಲೆಯ ಆರ್ಥಿಕತೆ ವ್ಯವಸ್ಥೆ ನಿಂತಿರುವುದು. ಧಾರ್ಮಿಕ ಕಾರ್ಯಕ್ರಮಗಳು ನಿಂತರೆ ಜಿಲ್ಲೆಯ ಉಸಿರು ನಿಂತಂತಾಗುತ್ತದೆ.

ಹಾಗಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ವೇಳೆ ಅನಗತ್ಯ ಗೊಂದಲ ಮಾಡಬೇಡಿ. ಕಾನೂನು ಪಾಲಿಸಿಕೊಂಡು ಹೋಗಿ,ಜಿಲ್ಲೆಯ ವಸ್ತುಸ್ಥಿತಿಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿವಳಿಕೆ ನೀಡಿ ಎಂದು ಪೋಲೀಸ್ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಧಾರ್ಮಿಕ ಆಚರಣೆಯ ಮೇಲೆ ಬೇರೆ ಬೇರೆ ರೀತಿಯ ಸವಾರಿಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಸಭೆಯಲ್ಲಿ ತಿಳಿಸಿದರು.

94 ಸಿ.ಸಿ.ಹಕ್ಕುಪತ್ರವನ್ನು ಶೀಘ್ರವಾಗಿ  ಫಲಾನುಭವಿಗಳಿಗೆ ನೀಡಿ ಎಂದು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ವಿನಾ ಕಾರಣಗಳನ್ನು ಮುಂದಿಟ್ಟಕೊಂಡು ಫಲಾನುಭವಿಗಳನ್ನು ಸತಾಯಿಸದಂತೆ ಶಾಸಕರು ಸೂಚನೆ ನೀಡಿದರು.

ಬಂಟ್ವಾಳ ಸರಕಾರಿ ಆಸ್ಪತ್ರೆಯನ್ನು ಸುಸಜ್ಜಿತವಾಗಿ ಮಾಡಲಾಗಿದೆಯಾದರೂ ವೈದ್ಯರ ಕೊರತೆಯನ್ನು ನೀಗಿಸದಿದ್ದರೆ ಯಾವ ಪ್ರಯೋಜನ, ಸರಕಾರದ ಮಟ್ಟದಲ್ಲಿ ಮಾತನಾಡಿದ್ದೇನೆ,ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ಆಸಕ್ತಿವಹಿಸಿ ಎಂದು ಸೂಚಿಸಿದರು.

ತಾಲೂಕಿನಲ್ಲಿ ಸುಮಾರು 16 ಸಕ್ರೀಯ ಡೆಂಗ್ಯೂ ಪ್ರಕರಣಗಳು ಇವೆ ಎಂದು ತಾಲೂಕು ವೈದ್ಯಾಧಿಕಾರಿ ಮಾಹಿತಿ ನೀಡಿದರು.

ಸೋರ್ನಾಡು-ಸಿದ್ದಕಟ್ಟೆ ರಸ್ತೆಯ ಕಾಮಗಾರಿ ಯಾಕೆ ಅರ್ಧ ಮಾಡಿಟ್ಟಿದ್ದೀರಿ? ಅನುದಾನ ಬಿಡುಗಡೆಯಾದರೂ ಕಾಮಗಾರಿ ಯಾಕೆ ಸಂಪೂರ್ಣ ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಪಡಿತರ ಚೀಟಿ ಯೋಜನೆಯ  ಅಕ್ಕಿ ಹಗರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಶಿಕ್ಷೆಯಾಗಿದಾ? ಮತ್ತು ತಾಲೂಕಿನಲ್ಲಿ ನಿರಂತರವಾಗಿ ಹಗರಣಗಳಾಗುತ್ತಿದ್ದರೂ ಕೂಡ ಅಧಿಕಾರಿಗಳ ಗಮನಕ್ಕೆ ಬಂದಿಲ್ವಾ?  ಪೋಲೀಸರ ದಾಳಿಯ ಬಳಿಕ ನಿಮಗೆ ಮಾಹಿತಿ ಸಿಗುತ್ತಿದೆಯಾ? ಎಂದು ಪ್ರಶ್ನಿಸಿದರು.

ಗ್ರಾಮೀಣ ಭಾಗದ ಅನೇಕ ಕಡೆಗಳಿಗೆ ಸರಕಾರಿ ಬಸ್ ಗಳು ಸಂಚಾರ ಮಾಡುತ್ತಿದ್ದು, ಇದೀಗ ಸಂಚಾರ ನಿಲ್ಲಿಸಿರುವ ಬಗ್ಗೆ ಆರೋಪಗಳು ಇವೆ,ಸರಿಪಡಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.