ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಧರ್ಮಸ್ಥಳ, ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ, ಮಂಗಳೂರು ಉಪವಿಭಾಗ ಬಂಟ್ವಾಳ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ನೆಲ ಜಲ ಪ್ರಾಣಿ ಸಂಕುಲ ವನ ಸಂರಕ್ಷಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯಾದ್ಯಂತ ಹಮ್ಮಿಕೊಂಡಿರುವ ದಶಲಕ್ಷ ಗಿಡ ನಾಟಿ ಕಾರ್ಯಕ್ರಮ ಜು.2 ರಂದು ಬಂಟ್ವಾಳ ತಾಲೂಕಿನ ಕಾವಲಪಡೂರು ಗ್ರಾಮದ ಅಲಂಪುರಿ ಸಾಲುಮರ ತಿಮ್ಮಕ್ಕ ವೃಕ್ಷ ಉದ್ಯಾನ ವನದಲ್ಲಿ ನೆರೆವೇರಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಡೆ ವಹಿಸಲಿದ್ದು, ಕರ್ನಾಟಕ ಸರಕಾರದ ಅರಣ್ಯ, ಜೀವಶಾಸ್ತ್ರ, ಪಡಿತರ ಸಚಿವರಾದ ಈಶ್ವರ ಖಂಡ್ರೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದದ್ದು . ಸಸಿ ವಿತರಣೆ ಯನ್ನು ಬಂಟ್ವಾಳ ಕ್ಷೇತ್ರ ಶಾಶಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾಡಿ, ಪುತ್ತೂರು ತಾಲೂಕಿನ ಅವಿನಾಶ್ ಕೊಡಂಕಿರಿ ರವರಿಗೆ “ಅರಣ್ಯ ಮಿತ್ರ ಪ್ರಶಸ್ತಿ” ಪ್ರದಾನ ವನ್ನು ಮಾಜಿ ಸಚಿವರಾದ ರಮಾನಾಥ ರೈ ನೆರೆವೇರಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್.ಶೌರ್ಯ ಕರಪತ್ರ ಬಿಡುಗಡೆ ಮಾಡಲಿರುವರು.
ಕಾರ್ಯಕ್ರಮದಲ್ಲಿ ಮಂಗಳೂರು ವೃತ್ತ ಸಿ.ಎಫ್. ಡಾ.ವಿ. ಕರಿಕಾಲನ್, ಮಂಗಳೂರು ವಿಭಾಗ ಡಿ.ಸಿ.ಎಫ್. ಅಂಟೋನಿ ಮರಿಯಪ್ಪ ವೈ.ಕೆ., ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ , ಕಾವಲಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮಿನಾರಾಯಣ ಶರ್ಮ, ಬಂಟ್ವಾಳ ವಲಯ ಅರಣ್ಯ ಅಧಿಕಾರಿ ಪ್ರಪುಲ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ಅನಿಲ್ ಕುಮಾರ್ ಎಸ್ ಎಸ್ ಮೊದಲಾದವರು ಉಪಸ್ಥಿತಿಯಲ್ಲಿರುವವರು ಎಂದು ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿಯಿಂದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ದಶಲಕ್ಷ ಗಿಡ ನಾಟಿ ಕಾರ್ಯಕ್ರಮ ಯೋಜನೆಯ ಹಿನ್ನೆಲೆ ಈ ಭೂಮಿಯ ಮೇಲಿರುವ ಸಕಲ ಜೀವರಾಶಿಗಳಿಗೂ ತಾಯಿಯ ಮಡಿಲು ಈ ಪ್ರಕೃತಿಯಾಗಿದೆ. ಎಲ್ಲಾ ಜೀವರಾಶಿಗಳ ಮಾತೆ ಪ್ರಕೃತಿಯಾದರೂ, ಮಾನವನ ಸ್ವಾರ್ಥ ಪ್ರಕೃತಿಯನ್ನು ಅತಿಯಾಗಿ ಬಳಸಿದ್ದಲ್ಲದೆ ನಾಶಕ್ಕೂ ಕಾರಣನಾಗಿದ್ದಾನೆ. ಇತರ ಎಲ್ಲಾ ಜೀವಸಂಕುಲಗಳಿಗೂ ಇದರಿಂದ ಅಪಾಯ ಉಂಟಾಗಿದೆ. ಯಾವುದೇ ಒಂದು ಭೌಗೋಳಿಕ ಪ್ರದೇಶದಲ್ಲಿ ಪ್ರಕೃತಿಯ ಎಲ್ಲಾ ಸಮತೋಲನ ಕಾಪಾಡಿಕೊಳ್ಳಲು ಒಟ್ಟು ವಿಸ್ತೀರ್ಣ ಶೇಕಡ 33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ದುರದೃಷ್ಟವೆಂದರೆ ನಮ್ಮ ದೇಶದಲ್ಲಿ 22% ಹಾಗೂ ನಮ್ಮ ರಾಜ್ಯದಲ್ಲಿ 21% ಮಾತ್ರ ಅರಣ್ಯ ಪ್ರದೇಶವಿದೆ. ಒಟ್ಟು 41 ಲಕ್ಷ ಅರಣ್ಯ ಪ್ರದೇಶ ನಮ್ಮ ರಾಜ್ಯದಲ್ಲಿದ್ದರೂ, ದಟ್ಟ ಅರಣ್ಯ ಪ್ರದೇಶ ಬಹಳ ಕಡಿಮೆ ಪ್ರಮಾಣದಲ್ಲಿದೆ. ನಗರೀಕರಣ, ಕೃಷಿ ವಿಸ್ತರಣೆ, ಕೈಗಾರಿಕರಣ ಮುಂತಾದ ಅನೇಕ ವಿಷಯಗಳು ಕ್ಷೀಣಿಸಿ ವನ್ಯ ಪ್ರಾಣಿಗಳಿಗೆ ಅತ್ಯಲ್ಪ ಕಾಡಿನಲ್ಲಿಯೇ ಕನಿಷ್ಠ ಆಹಾರ ಲಭ್ಯವಾಗುತ್ತಿಲ್ಲ. ಈ ಸಲುವಾಗಿಯೇ ಕಾಡಿನ ಪ್ರಾಣಿಗಳು ಊರಿನ ಕೃಷಿ ಭೂಮಿಗಳಿಗೆ ಆಹಾರಕ್ಕಾಗಿ ಬರುತ್ತಿರುವುದು, ಜನವಸತಿ ಪ್ರದೇಶಗಳಿಗೆ ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದು ಮಾನವ-ಪ್ರಾಣಿ ಸಂಘರ್ಷಕ್ಕೆ ಮತ್ತೊಂದು ದಾರಿಯನ್ನುಂಟು ಮಾಡಿದೆ.
ಈ ಸಮಸ್ಯೆಯನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ, ಧರ್ಮಸ್ಥಳ ಧರ್ಮ ಅಧಿಕಾರಿಗಳಾದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಒಂದು ವಿನೂತನ ಪರಿಹಾರವನ್ನು ಕಂಡುಕೊಂಡರು. ಅದುವೇ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳ ನಾಟಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ಒಂದು ಚಿಂತನೆಯನ್ನು ಒಂದು ದೊಡ್ಡ ಕಾರ್ಯಕ್ರಮವಾಗಿ ಅನುಷ್ಠಾನಗೊಳಿಸಿದರು. 2021 ರಲ್ಲಿ ಧರ್ಮಸ್ಥಳದ ಸಮೀಪದ ಅರಣ್ಯದಲ್ಲಿ ಅಂದಿನ ಅರಣ್ಯ ಮಂತ್ರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಇದು ಇಂದು ದೇಶದಲ್ಲಿ ಬೃಹತ್ ಹಣ್ಣಿನ ಗಿಡಗಳಷ ನಾಟಿ ಮಾಡುವ ಒಂದು ವಿನೂತನ ಕಾರ್ಯಕ್ರಮವಾಗಿದೆ. ಯೋಜನೆಯ ಮತ್ತೊಂದು ವಿಶಿಷ್ಟ ಕಾರ್ಯಕ್ರಮವಾದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರಿಂದ ರಾಜದಾದ್ಯಂತ ಈ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ಹಮ್ಮಿಕೊಳ್ಳಲಾಗಿದೆ.
ಹೆಬ್ಬಲಸು, ಮಾವು, ಪುನರ್ಪುಳಿ, ನೆಲ್ಲಿ, ಜಾರಿಗೆ, ಅರ್ತಿಹಣ್ಣು, ನೇರಳೆ, ಹುಣಸಿ, ಗೇರು, ಬಿದಿರು, ಮುಂತಾದ ಹಣ್ಣಿನ ಗಿಡಗಳನ್ನು ಕಾಡಿನ ಪ್ರದೇಶಗಳಲ್ಲಿ ನೆಡಯಲಾಗುತ್ತಿದೆ. ಮುಂದಿನ 8-10 ವರ್ಷಗಳಲ್ಲಿ ಇವುಗಳು ಸಮೃದ್ಧ ಫಲಗಳನ್ನು ವನ್ಯ ಪ್ರಾಣಿಗಳಿಗೆ ನೀಡಲಿವೆ. ಅರಣ್ಯ ಪ್ರದೇಶಗಳಲ್ಲಿಯೇ ಸಮೃದ್ಧ ಆಹಾರ ವನ್ಯಪ್ರಾಣಿಗಳಿಗೆ ಸಿಗಬೇಕೆನ್ನುವ ಶ್ರೇಷ್ಠ ಚಿಂತನೆಯಿಂದ ಈ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ 6,069 ಕಾರ್ಯಕ್ರಮಗಳನ್ನು ಹಮ್ಮಿಕೊಂಡು 3,70,000 ಕ್ಕೂ ಅಧಿಕ ಹಣ್ಣಿನ ಮರಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.
ಬಾರಿಯ ಯೋಜನೆಯ ದಶಲಕ್ಷ ಗಿಡ ನಾಟಿ ಕಾರ್ಯಕ್ರಮದ ಪ್ರಯುಕ್ತ ರಾಜ್ಯದಲ್ಲಿ ಸುಮಾರು 10,000 ಎಕರೆ ಭೂ ಪ್ರದೇಶದಲ್ಲಿ 10ಲಕ್ಷಕ್ಕೂ ಅಧಿಕ ಹಣ್ಣಿನ ಹಾಗೂ ಇತರ ಗಿಡ ನಾಟಿ ಕಾರ್ಯಕ್ರಮವನ್ನು ಸುಮಾರು ರೂ.1ಕೋಟಿ ಅನುದಾನದೊಂದಿಗೆ ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಸಹಾಯ ಯೋಗದೊಂದಿಗೆ ನಡೆಸಲಾಗುತಿದೆ.