ವಿಶ್ವಸಂಸ್ಥೆಯು ಮೇ 20 ಅನ್ನು ವಿಶ್ವ ಜೇನುನೊಣ ದಿನವೆಂದು ಘೋಷಿಸಿತು. ಈ ವರ್ಷದ ಧ್ಯೇಯವಾಕ್ಯ “ಪ್ರಕೃತಿಯಿಂದ ಪ್ರೇರಿತವಾದ ಜೇನುನೊಣಗಳು ನಮ್ಮೆಲ್ಲರನ್ನೂ ಪೋಷಿಸುತ್ತವೆ”

ಮೇ 20 ಆಧುನಿಕ ಜೇನುನೊಣ ಕೃಷಿಯ ಪ್ರವರ್ತಕ ಆಂಟನ್ ಜಾನ್ಸಾ ಜನಿಸಿದ ದಿನವಾಗಿದೆ. ಇಂದು ಜೇನುನೊಣಗಳು, ಪರಾಗಸ್ಪರ್ಶಕಗಳು ಮತ್ತು ಇತರ ಅನೇಕ ಕೀಟಗಳು ಹೇರಳವಾಗಿ ಕ್ಷೀಣಿಸುತ್ತಿವೆ. ಕೃಷಿ ಆಹಾರ ವ್ಯವಸ್ಥೆಗಳಿಗೆ ಪರಾಗಸ್ಪರ್ಶ ಅತ್ಯಗತ್ಯ ಬೆಳೆ ಇಳುವರಿಯನ್ನು ಹೆಚ್ಚಿಸುವುದರ ಜೊತೆಗೆ, ಪರಾಗಸ್ಪರ್ಶಕಗಳು ಆಹಾರದ ಗುಣಮಟ್ಟ ಮತ್ತು ವೈವಿಧ್ಯತೆಯನ್ನು ಸುಧಾರಿಸುತ್ತವೆ.

ಜೇನುನೊಣಗಳು ನೋಡಲು ಚಿಕ್ಕದಿರಬಹುದು. ಆದರೆ, ಈ ಜೇನುನೊಣಗಳ ಮೇಲೆಯೇ ಮನುಷ್ಯನ ಬದುಕು ಅವಲಂಬಿತವಾಗಿದೆ ಎಂಬುದು ಸೂರ್ಯಚಂದ್ರರಷ್ಟೇ ಸತ್ಯ ಜೇನುನೊಣಗಳಿಲ್ಲದೆ ಮನುಷ್ಯನ ಜೀವನ ಊಹಿಸುವುದೇ ಸಾಧ್ಯವಿಲ್ಲ. ಯಾಕೆಂದರೆ, ಬರೀ ಜೇನು ಕೊಡುವ ಕೆಲಸವನ್ನು ಮಾತ್ರ ಈ ಜೇನುನೊಣಗಳು ಮಾಡುತ್ತಿಲ್ಲ.

ಮನುಷ್ಯನ ಬದುಕಿನ ಎಲ್ಲಾ ಸ್ತರದಲ್ಲೂ ಜೇನಿಗೆ ಅದರದ್ದೇ ಆದ ಮಹತ್ವವಿದೆ. ಜೇನುನೊಣಗಳಿಲ್ಲದಿದ್ದರೆ ಮನುಷ್ಯನ ಆಹಾರಕ್ಕೂ ಕಷ್ಟಪಡಬೇಕಾದ ಸ್ಥಿತಿ ಇದೆ. ಜೇನು ಕೊನೆಯಾದರೆ ಒಂದರ್ಥದಲ್ಲಿ ನಮ್ಮ ಬದುಕೂ ಕೊನೆಯಾದಂತೆಯೇ. ಆದರೆ, ಇಂತಹ ಮಹತ್ವದ ಜೀವಗಳಿಗೆ ಈಗ ಸಂಚಕಾರ ಬಂದಿದೆ. ಇತ್ತೀಚಿಗೆ ಹತ್ತಿಪ್ಪತ್ತು ವರ್ಷಗಳಿಂದ ಜೇನುನೊಣಗಳು ಕಣ್ಮರೆಯಾಗುತ್ತಿವೆ. ಕೃಷಿ ಹಾಗೂ ತೋಟಗಾರಿಕೆಯ ಅಭಿವೃದ್ಧಿಯಲ್ಲಿ ಜೇನು ಸಾಕಣಿಕೆ 5ನೇ ಸ್ಥಾನದಲ್ಲಿದೆ.  ಇತ್ತೀಚಿನ ದಿನಗಳಲ್ಲಿ ಜೇನುನೊಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದಿಢೀರ್ ಆಗಿ ಜೇನುನೊಣಗಳು ಸಾವನ್ನಪ್ಪುತ್ತಿವೆ. ಇದು ವಿಶ್ವಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.ಜೇನು ತುಪ್ಪವನ್ನು ಸೇವಿಸಿದರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಇದರಿಂದ ಕಾರ್ಯಚಟುವಟಿಕೆ ಸಾಮರ್ಥ್ಯ ಹೆಚ್ಚಳ, ಲೈಂಗಿಕ ಶಕ್ತಿ ವೃದ್ಧಿ ಸೇರಿದಂತೆ ಅನೇಕ ಆರೋಗ್ಯಕರ ಉಪಯೋಗಗಳಿವೆ. ಬೆಳಗ್ಗೆ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚ ಜೇನು ತುಪ್ಪ ಸೇರಿಸಿ ಪ್ರತಿದಿನ ಕುಡಿದರೆ ದೇಹದ ತೂಕ ಕಡಿಮೆ ಆಗಲು ಸಹಕಾರಿಯಾಗಿದೆ. 

ಜೇನು ತುಪ್ಪವನ್ನು ನಾವು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಒಂದು ಚಮಚ ಜೇನು ತುಪ್ಪ ಶೇಖರಣೆಗೆ ಹತ್ತಾರು ಹೂಗಳಿಂದ ಜೇನು ಹುಳಗಳು ಜೇನು ಸಂಗ್ರಹಿಸಬೇಕಾಗುತ್ತದೆ. ಜೇನು ಹುಳುಗಳ ಶ್ರಮದಿಂದ ಮನುಷ್ಯನು ಜೇನು ತುಪ್ಪ ಸವಿಯುತ್ತಿದ್ದಾನೆ. ಅಲ್ಲದೇ ಪರಿಸರ ವ್ಯವಸ್ಥೆ ಸಮತೋಲನವಾಗಿರಲು ಜೇನು ಹುಳಗಳು ಅತ್ಯವಶ್ಯಕ. ಹೀಗಾಗಿ ಜೇನು ಹುಳಗಳಿಗೆ ಕೃತಜ್ಞತೆ ಸಲ್ಲಿಸಲು ಮೇ 20ರಂದು ಪ್ರಪಂಚದಾದ್ಯಂತ ‘ವಿಶ್ವ ಜೇನು ಹುಳುಗಳ ದಿನ’ವನ್ನಾಗಿ ಆಚರಿಸಲಾಗುತ್ತಿದೆ.